Kundapra.com ಕುಂದಾಪ್ರ ಡಾಟ್ ಕಾಂ

ಜಾನುವಾರು ಅನುತ್ಪಾದಕತೆ ನೀಗಿಸುವ ಬಗೆಗಿನ ಯೋಜನೆಗೆ ಕೇಂದ್ರ ಪಶುಸಂಗೋಪನಾ ಸಚಿವರ ಪ್ರಶಂಸೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶೇಷವಾಗಿ ತಾಂಡಾ ಜನರುಗಳ ಜಾನುವಾರುಗಳಲ್ಲಿನ ಬಂಜೆತನವನ್ನು ನೀಗಿಸಿ ಅವುಗಳನ್ನು ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ ಸಾಗಿಸುವ ಯೋಜನೆಯನ್ನು ರೂ. 25 ಕೋಟಿಗಳಿಗೆ ತಯಾರಿಸಿ ಕೇಂದ್ರ ಹೈನುಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಮೀನುಗಾರಿಕೆ ಸಚಿವರಾದ ಶ್ರೀ ಪರಷೋತ್ತಮ್ ರೂಪಲಾ ರವರಿಗೆ ಸಲ್ಲಿಸಿದ್ದು ಇದನ್ನು ಮಾನ್ಯ ಸಚಿವರು ಮುಕ್ತ ಕಂಠದಿಂದ ಪ್ರಶಂಸಿಸಿ ಇದಕ್ಕೆ ಅನುದಾನ ಒದಗಿಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮಾನ್ಯ ಸಂಸದರು ತಿಳಿಸಿದರು.

ಭಾರತ ಗೋಪ್ರಧಾನ ದೇಶ, ಬಡರೈತರು ಅದರಲ್ಲಿಯೂ ತಾಂಡಾದ ಲಂಬಾಣಿ ಜನಾಂಗದವರು ಗೋಮಾತೆಯ ಮೇಲೇ ಭಕ್ತಿ ಮತ್ತು ಜೀವನದ ಆಸರೆ ಹೊಂದಿದ್ದಾರೆ. ಅನುತ್ಪಾದಕ ಗೋವುಗಳನ್ನು ಸಾಕುವ ರೈತರು ಅನುಭವಿಸುವ ನಷ್ಟ ಅಪಾರ. ಈ ಹಸುಗಳನ್ನು ರೈತರು ಹಾಲು ಕೊಡದಿದ್ದರೂ ಸಾಕಲೇಬೇಕು. ಗೋಹತ್ಯಾ ನಿಷೇಧ ಕಾನೂನು ಪ್ರಸಕ್ತ ಜಾರಿಯಲ್ಲಿದೆ. ಅನುತ್ಪಾದಕ ಗೋವುಗಳು ರೈತರಿಗೆ ಹೊರೆಯಾಗಬಾರದು, ಈ ಯೋಜನೆಯಲ್ಲಿ ಅನುತ್ಪಾದಕ ರಾಸುಗಳನ್ನು ವಿವಿಧ ಹಳ್ಳಿಗಳಲ್ಲಿ ಪತ್ತೆ ಹಚ್ಚಿ, ಈ ಅನುತ್ಪಾದಕತೆಯ ಕಾರಣವನ್ನು ವೈಜ್ಞಾನಿಕ ವಿಧಾನದಲ್ಲಿ ಪತ್ತೆ ಹಚ್ಚಿ, ಇವುಗಳನ್ನು ವಿವಿಧ ಗುಂಪುಗಳಲ್ಲಿ ವರ್ಗೀಕರಿಸಿ, ಈ ಜಾನುವಾರುಗಳಿಗೆ ವಿವಿಧ ತರದ ಚಿಕಿತ್ಸೆಯನ್ನು ನೀಡಿ, ಅವುಗಳ ಸೂಕ್ತ ಅನುಸರಣೆಯನ್ನು ಅವು ಗರ್ಭ ಧರಿಸುವವರೆಗೆ ಅಥವಾ ಹಾಲು ನೀಡುವಂತೆ ಮಾಡಿ, ಅವುಗಳ ಅನುತ್ಪಾಕತೆಯನ್ನು ನೀಗಿಸಿ ಉತ್ಪಾದಕತೆಯತ್ತ ಸಾಗುವಂತೆ ಮಾಡಿ, ಈ ಸಂಶೋಧನೆಯಲ್ಲಿ ಹೊರಹೊಮ್ಮುವ ಸಂಶೋಧನಾ ಪರಿಣಾಮವನ್ನು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರಿಗೆ ತಲುಪಿಸುವ ಉದ್ದೇಶವನ್ನು ಈ ಯೋಜನೆಯಲ್ಲಿ ಹೊಂದಲಾಗಿದೆ.

ಶೂನ್ಯ ಉತ್ಪನ್ನ ಹೊಂದಿರುವ ಅನುತ್ಪಾದಕ ಗೋವುಗಳು ದಿನವೊಂದಕ್ಕೆ 10 ಲೀಟರ್ ನೀಡುವಂತಾದರೂ ಸಹ ವರ್ಷವೊಂದಕ್ಕೆ 19,000 K) ರೂಪಾಯಿ ನಿವ್ವಳ ಆದಾಯವನ್ನು ನೀಡುವ ರಾಸುಗಳಾಗಿ ರೈತನಿಗೆ ಲಾಭವನ್ನು ಖಂಡಿತಾ ತಂದುಕೊಡುತ್ತವೆ. ಇದರಿಂದ ಅನುತ್ಪಾದಕ ಬರಡು ರಾಸಿನ ಮುಖಬೆಲೆ ರೂ. 6,000-00 ಇರುವುದು ಪ್ರಸಕ್ತ ಮಾರುಕಟ್ಟೆ ಕನಿಷ್ಟ ದರವಾಗಿ 45,000-00 ಕ್ಕೆ ಏರಲಿದೆ. ಕಾರಣ ರೈತರಿಗೆ ಅತ್ಯಂತ ಉಪಯೋಗಿವಾಗಿರುವ ಮತ್ತು ಅನುತ್ಪಾದಕತೆಗೆ ಕಾರಣ ಪತ್ತೆ ಮಾಡುವ ಸಂಶೋಧನಾ ಅಂಶಗಳನ್ನು ಹೊಂದಿರುವ ಈ ಯೋಜನೆಯ ಅನುಷ್ಠಾನ ಪ್ರತಿ ಹಳ್ಳಿಯಲ್ಲೂ ಸಹ ಆಗಬೇಕಿದೆ ಎಂದು ಸಚಿವರು ತಿಳಿಸಿದರು ಎಂದು ಸಂಸದರು ವಿವರಿಸಿದರು.

ಈ ಯೋಜನೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿರಿಸಿಕೊಂಡಿರುವ ತಾಂಡಾ ಜನರ ಜಾನುವಾರುಗಳ ಅನುತ್ಪಾದಕತೆಯನ್ನು ಮತ್ತು ಅವುಗಳಲ್ಲಿನ ಬಂಜೆತನವನ್ನು ನಿವಾರಿಸಿ ಅವುಗಳನ್ನು ಗರ್ಭಧರಿಸಿ ಕರು ಹಾಕುವಂತೆ ಮಾಡುವ ಯೋಜನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಅಧೀನದ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದನ್ನು ಸಂಸದರು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸಲ್ಲಿಸಲು ಸೂಚನೆ ನೀಡಿ ಅದರಂತೆ ಯೋಜನೆಯನ್ನು ಸಲ್ಲಿಸಲಾಗಿತ್ತು.

ಈ ಯೋಜನೆಗೆ ಮಾನ್ಯ ಕೇಂದ್ರ ಪಶುಸಂಗೋಪನೆ ಸಚಿವರು ಉತ್ತಮ ಯೋಜನೆಯೆಂದು ಹಾಗೂ ರೈತರಿಗೆ ಉಪಯುಕ್ತವೆಂದು ಪ್ರಶಂಸಿಸಿದ್ದು ಇಡೀ ದೇಶಕ್ಕೆ ಈ ಮಾದರಿಯ ಯೋಜನೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು ಎಂದು ಸಂಸದ ಶ್ರೀ ಬಿ.ವೈ.ರಾಘವೇಂದ್ರ ತಿಳಿಸಿದರು.

Exit mobile version