Kundapra.com ಕುಂದಾಪ್ರ ಡಾಟ್ ಕಾಂ

ಮಾಜಿ ಶಾಸಕ, ಸಹಕಾರಿ ಧುರೀಣ ಜಿ.ಎಸ್ ಆಚಾರ್ ಪುಣ್ಯತಿಥಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು ಆಗಿದ್ದ ಜಿ.ಎಸ್. ಆಚಾರ್ ಪುಣ್ಯತಿಥಿ ಆಚರಣೆಯನ್ನು ಜೂನ್ ೨೪ರಂದು ಬೈಂದೂರಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಪ್ರಧಾನ ಕಛೇರಿಯಲ್ಲಿ ಆಚರಿಸಲಾಯಿತು.

ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷರು, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ದಿ.ಜಿ.ಎಸ್ ಆಚಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿ ಸಹಕಾರ, ಸಾಮಾಜಿಕ, ರಾಜಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಿ.ಎಸ್ ಆಚಾರ್ ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಸಾಧನೆ ನೆನಪಿನಲ್ಲಿಡುವಂತಹದ್ದು. ಅನುಭವಿ ರಾಜಕಾರಣಿಯಾಗಿದ್ದ ಅವರು ಬೈಂದೂರು ಕ್ಷೇತ್ರದಲ್ಲಿ ನಾನು ಸೇರಿದಂತೆ ಹಲವಾರು ಯುವ ನಾಯಕರನ್ನು ಬೆಳೆಸಿದವರು. ಅವರ ಸ್ಪೂರ್ತಿ, ಮಾರ್ಗದರ್ಶನ ಅವರಿಂದ ಕಲಿತ ಎಲ್ಲಾ ನಾಯಕರಲ್ಲಿಯೂ ನೋಡಬಹುದಾಗಿದೆ. ಅವರು ಇಲ್ಲದಿದ್ದರೂ ಅವರ ಆದರ್ಶ ನಮ್ಮೊಡನೆ ಇದೆ. ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗದೀಶ ಆಚಾರ್, ರವೀಂದ್ರ ಶ್ಯಾನುಭಾಗ್, ಮಂಜುನಾಥ ಶೆಟ್ಟಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಎಂ.ವಿನಾಯಕ ರಾವ್ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು.

Exit mobile version