Kundapra.com ಕುಂದಾಪ್ರ ಡಾಟ್ ಕಾಂ

ವೆಂಟನ ಫೌಂಡೇಶನ್‌: ಕೊರವಡಿ ಶಾಲೆಗೆ ಹೆಣ್ಣು ಮಕ್ಕಳ ಶೌಚಾಲಯ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿಕ್ಷಣದಲ್ಲಿ ಮಾಧ್ಯಮ ಮುಖ್ಯವಲ್ಲ. ನಾನು ಸ್ವತಃ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು ಕಠಿಣ ಪರಿಶ್ರಮದಿಂದ ಈಗ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಜೀವನದಲ್ಲಿ ಗುರಿ ಹಾಗೂ ಅದಕ್ಕೆ ಪೂರಕವಾದ ಪರಿಶ್ರಮವಿದ್ದರೆ ಯಾವುದು ಅಸಾಧ್ಯವಲ್ಲ ಎಂದು ಉಡುಪಿ ವೆಂಟನ ಫೌಂಡೇಶನ್ ಸದಸ್ಯೆ ಹಾಗೂ ಉಡುಪಿಯ 99ಗೇಮ್ಸ್ ಆನ್ ಲೈನ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷೆ ಶಿಲ್ಪಾ ಭಟ್ ಹೇಳಿದರು.

ಅವರು ಕುಂಭಾಶಿ ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಂಟನ ಫೌಂಡೇಶನ್ ವತಿಯಿಂದ ಸುಮಾರು ರೂಪಾಯಿ 5.5 ಲಕ್ಷದ ವೆಚ್ಚದಲ್ಲಿ ನಿರ್ಮಿಸಲಾದ ಹೆಣ್ಣು ಮಕ್ಕಳ ಶೌಚಾಲಯವನ್ನು ಹಸ್ತಾಂತರಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಅಂತೆಯೇ ಹೆಣ್ಣು ಮಕ್ಕಳು ವೈಯಕ್ತಿಕ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ಈ ಶೌಚಾಲಯವನ್ನು ಫೌಂಡೇಶನ್ ಮೂಲಕ ನಿರ್ಮಿಸಲಾಗಿದೆ. ಇದರ ಮುಂದಿನ ನಿರ್ವಹಣೆ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ಆರ್ ಅಧ್ಯಕ್ಷತೆ ವಹಿಸಿದ್ದರು. ಕೊರವಡಿ ಎಜುಕೇಶನಲ್ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ ಮ್ಯಾನೆಜಿಂಗ್ ಟ್ರಸ್ಟಿ ರಾಜೇಶ್ ಬಂಗೇರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯರಾಮ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಹತ್ವಾರ್, ಕುಂದಾಪುರ ವಲಯ ಶಿಕ್ಷಣ ಸಂಯೋಜಕ ಸಂತೋಷ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣದ ಜವಾಬ್ಧಾರಿ ಹೊತ್ತು ಶೀಘ್ರದಲ್ಲಿ ನಿರ್ಮಿಸಿದ ಎಂಜಿನಿಯರ್ ಶ್ರೀನಿಧಿ ಉಪಾಧ್ಯ ಹಾಗೂ ರೋಟರಿ ಸಮುದಾಯ ದಳದ ಅಧ್ಯಕ್ಷ ಶ್ರೀಧರ ಪುರಾಣಿಕ್ ಅವರನ್ನು ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ನಿವೃತ್ತ ಶಿಕ್ಷಕ ರಾಮಚಂದ್ರ ಉಪಾಧ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಮಾಲತಿ ಶೆಟ್ಟಿ ವಂದನಾರ್ಪಣೆಗೈದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version