ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ೨೦೨೨-೨೩ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪ್ರಥಮ ಸಭೆ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಲೆಯ ಸಂಚಾಲಕ ಎನ್. ಸದಾಶಿವ ನಾಯಕ್, ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದ ಶಾಲೆಗೆ ಬಹಳಷ್ಟು ಸಮಸ್ಯೆಗಳಾಗಿದೆ. ಸರಕಾರ ನೀತಿ ನಿಯಮಗಳಿಗೆ ಅನುಸಾರವಾಗಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರ ಶಾಲಾ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದ್ದರೂ ಪೋಷಕರಿಗೆ ಹೊರೆಯಾದಂತೆ ಅತಿ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶಾಲೆ ಉತ್ತಮ ಸಾಧನೆ ಮಾಡಿದ್ದು, ಮಕ್ಕಳ ದಾಖಲಾತಿಯಲ್ಲೂ ಈ ವರ್ಷ ಉತ್ತಮ ಪ್ರಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಅವರು ಶಾಲೆಯ ನೀತಿ, ನಿಯಮ, ಶಿಸ್ತು ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ತ ಅವರು ಮಕ್ಕಳ ವಿಚಾರದಲ್ಲಿ ಪೋಷಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಇನ್ನಿತರ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೋಷಕರು ಸಲಹೆ ಸೂಚನೆ ನೀಡಿದರು. ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕಿ ವೀಣಾ ಎಚ್. ಸ್ವಾಗತಿಸಿದರು. ಪೋಷಕ ಪ್ರತಿನಿಧಿ ಮಂಜುಳಾ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸುಜಾತಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ರೇಷ್ಮಾ ಚಿತ್ತಾಲ್ ವಂದಿಸಿದರು.