ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.5: ಮರವಂತೆ ಸಮುದ್ರಕ್ಕೆ ಕಾರು ಉರುಳಿಬಿದ್ದ ಘಟನೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕು ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಸಹ ಪ್ರಯಾಣಿಕನೋರ್ವನ ಮೃತದೇಹ ಸೋಮವಾರ ಸಂಜೆ ಹೊತ್ತಿಗೆ ಹೊಸಾಡು ಸಮೀಪದ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ. ಕುಂದಾಪುರ ಕಾಡಿನಕೊಂಡದ ನಿವಾಸಿ ನಾರಾಯಣ ಆಚಾರ್ ಎಂಬುವವರ ಅವರ ಪುತ್ರ ರೋಶನ್ ಆಚಾರ್ (24) ಮೃತ ಯುವಕ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು ಭಾನುವಾರ ಬೆಳಿಗ್ಗೆನಿಂದ ರೋಶನ್‌ಗಾಗಿ ರಾತ್ರಿವರೆಗೂ ವ್ಯಾಪಕ ಶೋಧ ನಡೆಸಲಾಗಿತ್ತು. ನಂತರ ಸೋಮವಾರವೂ ಪತ್ತೆಗೆ ಹುಡುಕಾಟ ಮುಂದುವರೆಸಲಾಗಿತ್ತು. ಸ್ಕೂಬ್ ಡ್ರೈವ್ ನಿಪುಣ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ವಿನಯ್ ಎಂ ಕೊರ್ಲಹಳ್ಳಿ, ಮುಳುಗು ತಜ್ಞ ದಿನೇಶ್ ಗಂಗೊಳ್ಳಿ, ಸ್ಥಳೀಯರ ಸಹಿತ ರೋಶನ್ ಕುಟುಂಬಿಕರು, ಸ್ನೇಹಿತರು ಮರವಂತೆ ಬಳಿ ಮೊಕ್ಕಾಂ ಇದ್ದರು.
ಕುಂದಾಪುರ ಕಡೆಯಿಂದ ಕುಮಟಾದತ್ತ ಸ್ವಿಫ್ಟ್ ಕಾರಿನಲ್ಲಿ ನಾಲ್ವರು ತೆರಳುತ್ತಿದ್ದ ಸಂದರ್ಭ ಕಾರು ಚಾಲನೆ ಮಾಡುತ್ತಿದ್ದ ವಿರಾಜ್ ಆಚಾರ್ ಅವರ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದ ಪರಿಣಾಮ ಕಾರಿನೊಳಗಿದ್ದ ಚಾಲಕ ವಿರಾಜ್ ಸಾವನ್ನಪ್ಪಿದ್ದರು. ಈ ವೇಳೆ ರೋಶನ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಕಾರ್ತಿಕ್ ಆಚಾರ್ ಹಾಗೂ ಸಂದೇಶ್ ಪ್ರಾಣಾಪಾಯದಿಂದ ಪಾರಾಗಿದ್ದರು. ಭಾನುವಾರ ಮುಂಜಾನೆ ಸಮುದ್ರದಿಂದ ಕಾರನ್ನು ಮೇಲಕ್ಕೆತ್ತಲಾಯಿತು.