Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ, ಮರವಂತೆಯಲ್ಲಿ ಕಡಲಕೊರೆತ: ಸಂಸದ ಬಿ. ವೈ. ರಾಘವೇಂದ್ರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಡಲ ಕೊರೆತದಿಂದ ಹಾನಿಗೆ ಒಳಗಾದ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಹಾಗೂ ಮರವಂತೆ ಪ್ರದೇಶಗಳಿಗೆ ಶಿವಮೊಗ್ಗ ಲೋಕಸಭಾ ಸಂಸದರಾದ ಬಿ. ವೈ. ರಾಘವೇಂದ್ರ ಹಾಗೂ ಶಾಸಕರಾದ ಸುಕುಮಾರ್ ಶೆಟ್ಟಿ ಅವರು ಗುರುವಾರ ಭೇಟಿ ನೀಡಿ ವೀಕ್ಷಿಸಿದರು.

ಮರವಂತೆ ಹೊರಬಂದರು ಪ್ರದೇಶದ ಸಮೀಪ ಕಡಲ್ಕೊರೆತದಿಂದ ವ್ಯಾಪಕ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಸಂಸದರು ಕಡಲ್ಕೊರೆತಕ್ಕೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಹಾಗಾಗಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಂಸತ್ತಿನ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲಾಗುವುದು. ಶಾಸಕರ ಜೊತೆಗೂಡಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಜನರ ಸಮಸ್ಯೆಯ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.

ಕಾಮಗಾರಿಯಲ್ಲಿ ಹಣ ದುರುಪಯೋಗವಾದರೆ ಈ ಕುರಿತು ಸೂಕ್ತ ತನಿಖೆ ನಡೆಯಬೇಕು. ರಾಜ್ಯ ಸರ್ಕಾರದ ವತಿಯಿಂದ ಮರವಂತೆ ಭಾಗದ ವಿವಿಧ ಅಭಿವೃದ್ಧಿಗೆ ಈಗಾಗಲೇ 84 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.

ಪ್ರಕೃತಿಯ ಮುಂದೆ ಯಾರು ಕೂಡ ದೊಡ್ಡವರಲ್ಲ, ತಂತ್ರಜ್ಞಾನ ಉಪಯೋಗಿಸಿಕೊಂಡು ಕಡಲ್ಕೊರತ ತಡೆಗೆ ಯೋಜನೆಗಳನ್ನು ರೂಪಿಸಬೇಕು. ಬೈಂದೂರು ಕ್ಷೇತ್ರದಲ್ಲಿ ಮಳೆಯಿಂದ ಸಮಸ್ಯೆ ಅನುಭವಿಸುತ್ತಿರುವ ಜನರ ತೊಂದರೆಗಳಿಗೆ ಶಾಶ್ವತ ಪರಿಹಾರ ಕೊಡಲಾಗುವುದು ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್, ಕಾರ್ಯನಿರ್ವಹಾಧಿಕಾರಿ ಪ್ರಸನ್ನ, ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಾದ ಉದಯ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಮುಖಂಡರುಗಳಾದ ಬಾಬು ಹೆಗಡೆ, ಸುರೇಶ್ ಬಟವಾಡಿ, ಶಂಕರ ಪೂಜಾರಿ, ಶರತ್ ಕುಮಾರ್‌ ಶೆಟ್ಟಿ ಮೊದಲಾದವರು ಉಪಸಿತರಿದ್ದರು.

Exit mobile version