Kundapra.com ಕುಂದಾಪ್ರ ಡಾಟ್ ಕಾಂ

ರೋಟರಿಯ ಮೂಲಕ ನೆಲ, ಜಲ, ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ನಡೆಯಲಿ: ಡಾ. ಉಮೇಶ್ ಪುತ್ರನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರೋಟರಿಯಿಂದ ರಚನಾತ್ಮಕ ಕೆಲಸಗಳ ಜೊತೆಗೆ ನೆಲ, ಜಲ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ಆಗಬೇಕಿದ್ದು, ಪ್ರತಿಯೋರ್ವ ರೋಟರಿ ಸದಸ್ಯರು ಇದರೊಂದಿಗೆ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲೆ 3182 ಝೋನ್-1 ಇದರ ಸಹಾಯಕ ಗವರ್ನರ್ ಡಾ. ಉಮೇಶ್ ಪುತ್ರನ್ ಹೇಳಿದರು.

ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಬುಧವಾರ ಕ್ಲಬ್‌ನ ಈ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್. ಉದಯ ಆಚಾರ್ ಅವರಿಗೆ ರೋಟರ್ ಕಾಲರ್ ಹಸ್ತಾಂತರಿಸಿ ಮಾತನಾಡಿದರು. ರೋಟರಿ ಜಿಲ್ಲೆ 3182ನಿಂದ ಪ್ರಸಕ್ತ ಸಾಲಿನಲ್ಲಿ ಕಲಿಕಾ ಸಾಮರ್ಥ ನ್ಯೂನ್ಯತೆ ಇರುವ ಮಕ್ಕಳ ಅಭ್ಯುದಯಕ್ಕೆ ಸಂಬಂಧಿಸಿದ ಯೋಜನೆಗಳು, ಅಂಗಾಂಗ ಹಾಗೂ ಚರ್ಮ ದಾನ, ಸ್ತ್ರೀ ಸಬಲೀಕರಣ, ಇಲೆಕ್ಟ್ರಾನಿಕ್ಸ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಕಾರ್ಯನಿರ್ವಹಿಸಲಾಗುತ್ತದೆ ಎಂದ ಅವರು ಸೇವಾಕಾಂಕ್ಷಿ ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢಿಕರಿಸಿ ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನ ಗುರುತಿಸುತ್ತಾರೆ. ಒಬ್ಬರಿಂದಾಗದ ಕೆಲಸ ಸಂಸ್ಥೆಯ ಮೂಲಕ ಮಾಡಬಹುದು. ಹೀಗಾಗಿ ಎಲ್ಲರ ಸಹಭಾಗಿತ್ವ ಹಾಗೂ ಎಲ್ಲರೂ ಒಂದಾಗಿ ಬೆರೆತು ಸಂಸ್ಥೆಯನ್ನು ಮುನ್ನಡೆಸುವಲ್ಲಿ ಪ್ರಯತ್ನಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಹೆಚ್. ಸುಜಯೇಂದ್ರ ಹಂದೆ ಮಾತನಾಡಿ, ಪ್ರಾಣಿಗಳು ಜೀವಿಸಿದರೆ ಮನುಷ್ಯ ಬದುಕುತ್ತಾನೆ. ಮಹಾನ್ ವ್ಯಕ್ತಿಗಳು ಎಂದೆನ್ನಿಸಿಕೊಂಡವರು ಕೇವಲ ಬದುಕಲಿಲ್ಲ. ಬದಲಿಗೆ ಇತಿಹಾಸ ಸೃಷ್ಟಿಸಿ ಹೋದರು. ನಾವು ಮಾಡುವ ಉತ್ತಮ ಕಾರ್ಯದ ಮೂಲಕ ಮಹಾನ್ ಎನ್ನಿಸಿಕೊಳ್ಳುತ್ತೇವೆ. ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಸಮಷ್ಟಿ ಪ್ರಜ್ಞೆ ಬೆಳೆದರೆ ಗೆಲುವಿನ ಸಾರಿ ಸುಗಮವಾಗುವುದು ಎಂದರು.

► ಬೈಂದೂರು ಇನ್ನರ್‌ವೀಲ್ ಕ್ಲಬ್ ನೂತನ ಅಧ್ಯಕ್ಷೆ ಭಾನುಮತಿ ಬಿ.ಕೆ. ಪದಪ್ರದಾನ – https://kundapraa.com/?p=60416 .

ಬೈಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷ ಹರೇಗೋಡು ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ಸೌಂಡ್ ಇಂಜಿನಿಯರಿಂಗ್‌ನಲ್ಲಿ ರ‍್ಯಾಂಕ್ ವಿಜೇತ ಕ್ರಮವಾಗಿ ಅಕ್ಷತಾ ನಾಯ್ಕ್ ಮತ್ತು ವರ್ಧನ್ ಆಚಾರ್ಯ ಹರೇಗೋಡು ಇವರನ್ನು ಸನ್ಮಾನಿಸಲಾಯಿತು. ರೋಟರಿ ಬುಲೆಟಿನ್ ಹಾಗೂ ಬೈಂದೂರು ರೋಟರಿ ಡೈರೆಕ್ಟರಿಯನ್ನು ಬಿಡುಗಡೆಗೊಳಿಸಲಾಯಿತು. ಕ್ಲಬ್ಬಿಗೆ ಹನ್ನೆರಡು ಹೊಸ ಸದಸ್ಯರು ಸೇರ್ಪಡೆಯಾದರು.

ರೋಟರಿ ವಲಯ ಸೇನಾನಿಯಗಿ ಆಯ್ಕೆಯಾದ ಬೈಂದೂರು ರೋಟರಿ ನಿಕಟಪೂರ್ವ ಅಧ್ಯಕ್ಷ ಡಾ. ಪ್ರವೀಣ ಶೆಟ್ಟಿ ಸ್ವಾಗತಿಸಿದರು. ನಿರ್ಗಮನ ರೋಟರಿ ಕಾರ್ಯದರ್ಶಿ ವೈ. ಮಂಗೇಶ ಶ್ಯಾನುಭಾಗ್ ವಾರ್ಷಿಕ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಸುಧಾಕರ ಪಿ. ಬೈಂದೂರು ವಂದಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Exit mobile version