Kundapra.com ಕುಂದಾಪ್ರ ಡಾಟ್ ಕಾಂ

ಯು.ಬಿ.ಎಸ್. ಚಾರಿಟೇಬಲ್ ಟ್ರಸ್ಟ್: ಐದು ನೂತನ ಶಾಲಾ ಬಸ್‌ಗಳ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ಸಹ ಸದ್ಯ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಹುಟ್ಟೂರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದಎರಡು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಂದಾಗಿದ್ದು, ಇದು ಲಾಭಕ್ಕಾಗಿ ಮಾಡಿದ ವ್ಯವಹಾರವಲ್ಲ. ಈ ಸತ್ಕಾರ್ಯದಿಂದ ಹೃದಯ ತುಂಬಿದೆ. ನಮ್ಮ ಎರಡೂ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು ಎಂಬ ನೆಲೆಯಲ್ಲಿ ನಮ್ಮ ಸಂಸ್ಥೆಗೆ ನೂತನ ಹದಿನೈದು ಬಸ್‌ಗಳನ್ನು ಖರೀದಿಸಲಾಗಿದೆ. ಇದು ಈ ಎರಡೂ ಶಾಲೆಗಳನ್ನು ಟ್ರಸ್ಟಿನ ಸುಪರ್ದಿಯಲ್ಲಿ ತೆಗೆದುಕೊಂಡ ಮೊದಲ ದಿನದ ಯೋಚನೆಯಾಗಿತ್ತು ಎಂದು ಯುಬಿಎಸ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಯು.ಬಿ. ಶೆಟ್ಟಿ ಹೇಳಿದರು.

ಇಲ್ಲಿನ ಯುಬಿಎಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ಟಾಟಾ ಸಂಸ್ಥೆಯ ನೂತನ ಐದು ಶಾಲಾ ಬಸ್‌ಗಳನ್ನು ಲೋಕಾರ್ಪಣೆ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆಯಾಗಬೇಕು ಎಂಬ ನಿಟ್ಟಿನಲ್ಲಿ ವಾಹನವನ್ನು ಖರೀದಿಸಲಾಗಿದೆ. ಮುಂದಿನ ದಿನದಲ್ಲಿ ಸಂಸ್ಥೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಟಾನ ಮಾಡಲಾಗುವುದು ಎಂದರು.

ಟಾಟಾ ಮೋಟರ‍್ಸ್‌ನ ಕುಂದಾಪುರ ಘಟಕದ ಶಾಖಾಧಿಕಾರಿ ಸತೀಶ್ ಗಾಣಿಗ ವಾಹನದ ಕೀಲಿಕೈ ಹಸ್ತಾಂತರಿಸಿದರು. ಸಮೂಹ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಇದ್ದರು. ಸುಷ್ಮಾ ಮಯ್ಯ ಪ್ರಾರ್ಥಿಸಿದರು. ಯುಬಿ ಶೆಟ್ಟಿ ಅಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಸ್ವಾಗತಿಸಿ, ಉಪ್ಪುಂದ ವಿವೇಕಾನಂದ ಅಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಜಯಶೀಲಾ ನಾಯಕ್ ವಂದಿಸಿದರು. ಸಹ ಮುಖ್ಯಶಿಕ್ಷಕಿ ರಂಜೀತಾ ಹೆಗ್ಡೆ ನಿರೂಪಿಸಿದರು.

Exit mobile version