ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಸ.ಪ.ಪೂ. ಕಾಲೆಜಿನಲ್ಲಿ 2022-23ನೇ ಸಾಲಿನ ಮೇಜರ್ ಸೋಮನಾಥ ಶರ್ಮ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ‘ವಿದ್ಯಾ ಪಥದರ್ಶನ’ ಹೆಸರಿನಲ್ಲಿ ನಡೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಾನ್ ಮಿಲಿಟರಿ ನಾಯಕನ ಹೆಸರನ್ನು ಹೊತ್ತಿರುವ ಸಂಘ ಆ ಮಿಲಿಟರಿ ಶಿಸ್ತು, ರಾಷ್ಟ್ರ ಪ್ರೇಮವನ್ನು ಅಳವಡಿಸಿಕೊಂಡು ಉತ್ತಮ ಕಾರ್ಯಕ್ರಮ ನಡೆಸಲಿ. ಇಂದಿನ ವಿದ್ಯಾರ್ಥಿಗಳ ಎಲ್ಲಿ ಯಶಸ್ಸೇ ನಾಳಿನ ನಮ್ಮ ನೆಮ್ಮದಿಯ ಸಮಾಜಕ್ಕೆ ಕಾರಣವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಯಾದವ ವಿ ಕರ್ಕೇರ ಅವರು ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಎಲ್ಲಾ ಚಟುವಟಿಕೆಗಳು ನಮ್ಮನ್ನು ಶಿಸ್ತಿಗೆ ಅಳವಡಿಸುವ ಕೆಲಸ ಮಾಡಬೇಕು. ಸಮಯದ ನಿಖರವಾದ ಪರಿಮಿತಿಯೊಳಗೆ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮುಗಿಯಬೇಕು. ಎಲ್ಲಾ ವಿದ್ಯಾರ್ಥಿಗಳು ವಿವಿಧ ಸಂಘದ ಅಡಿಯಲ್ಲಿ ನಡೆಯುವ ಒಂದಾದರೂ ಚಟುವಟಿಕೆಯಲ್ಲಿ ಭಾಗವಹಿಸಲೇಬೇಕು. ಎಲ್ಲಾ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಹೆಮ್ಮೆಪಡುವ ಹಾಗೆ ಬೆಳೆಯಬೇಕು. ಕಾಲೇಜಿಗೆ ಒಳ್ಳೆಯ ಹೆಸರು ತರಬೇಕು ” ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಉಪ್ಪುಂದ ಗ್ರಾಮ ಪಂಚಾಯತಿ ಸದಸ್ಯರಾದ ಶೇಖರ ಪೂಜಾರಿ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಸತ್ಯನಾರಾಯಣ, ವಿದ್ಯಾರ್ಥಿ ನಾಯಕನಾದ ಶಿವರಾಜ ಆಚಾರ್ಯ, ವಿದ್ಯಾರ್ಥಿ ನಾಯಕಿಯಾದ ದಿವ್ಯಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಸಂಘದ ನಾಯಕರು ಈ ವರ್ಷ ತಾವು ಹಮ್ಮಿಕೊಳ್ಳಲಿರುವ ಎಲ್ಲಾ ಚಟುವಟಿಕೆಗಳ ವರದಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಶಿವಾನಿ ಸ್ವಾಗತಿಸಿದರು. ಅನನ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

