Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರಿನೊಂದಿಗೆ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಆರೋಪಿಗಳಿಗೆ ಅ.1ರ ತನಕ ನ್ಯಾಯಾಂಗ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಆನಂದ ದೇವಾಡಿಗ ಎಂಬುವವರನ್ನು ಸುಟ್ಟು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಧನೇಶ್ ಮುಗಳಿ ಅವರು ಅಗಸ್ಟ್ 1ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.

ಕೊಲೆಯಾದ ಆನಂದ ದೇವಾಡಿಗ

ಹೇನಬೇರು ರಸ್ತೆ ಬಳಿ ಜುಲೈ 12ರಂದು ನಡೆದ ಘಟನೆಗೆ ಜಾಡು ಹಿಡಿದು ಹೊರಟ ಪೊಲೀಸರು ಜುಲೈ 14ರ ಬೆಳಿಗ್ಗೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಪೂಜಾರಿ (30) ಹಾಗೂ ಇವರಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರ್ಕಳ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಅವರನ್ನು ಬಂಧಿಸಿತ್ತು. ಜೂ.14 ಹಾಗೂ 15ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಮುಖ ಆರೋಪಿಗಳಿಬ್ಬರ ಕಸ್ಟಡಿ ಅವಧಿ ಸೋಮವಾರಕ್ಕೆ ಮುಗಿದಿದ್ದು ಇನ್ನಿಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರಕ್ಕೆ ಮುಗಿಯಲಿತ್ತು. ಮಹಜರು, ಪಂಚನಾಮೆ, ಆರೋಪಿಗಳ ಹೇಳಿಕೆ, ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಎಲ್ಲಾ ತನಿಖಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಈ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸರ ತಂಡ ಸೋಮವಾರ ಸಂಜೆ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸದಾನಂದ, ಸತೀಶ್, ನಿತಿನ್ ನನ್ನು ಹಿರಿಯಡಕ ಸಬ್ ಜೈಲ್ ಹಾಗೂ ಮಹಿಳಾ ಆರೋಪಿ ಕಾರಣ ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ:
► ಕೊಲೆ ಪ್ರಕರಣವನ್ನು ಶೀಘ್ರ ಭೇದಿಸಿದ ಬೈಂದೂರು ಪೊಲೀಸ್ ತಂಡಕ್ಕೆ ರೂ.50,000 ಬಹುಮಾನ – https://kundapraa.com/?p=60578 .
► ನಿದ್ರೆ ಮಾತ್ರೆ ತಿನ್ನಿಸಿ ಕಾರು ಸಹಿತ ಬೆಂಕಿ ಹಚ್ಚಿ ಕೊಲೆ. ನಾಲ್ವರು ವಶಕ್ಕೆ – https://kundapraa.com/?p=60568 .
► ಬೈಂದೂರು: ಕಾರಿಗೆ ಬೆಂಕಿ ಹಚ್ಚಿ ಮೇಸ್ತ್ರಿಯ ಕೊಲೆ? ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು – https://kundapraa.com/?p=60527.
► ಬೈಂದೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿ – ಕಾರು ಪತ್ತೆ – https://kundapraa.com/?p=60500 .

Exit mobile version