Kundapra.com ಕುಂದಾಪ್ರ ಡಾಟ್ ಕಾಂ

ಗಂಟಿಹೊಳೆ: ಶಾಲೆಗೆ ಹೊರಟಿದ್ದ ಬಾಲಕಿ‌ ಕುಸಿದುಬಿದ್ದು ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.20:
ಶಾಲೆಗೆ ಹೊರಟಿದ್ದ ಬಾಲಕಿ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟು ದಾರುಣ ಘಟನೆ ಬಿಜೂರು ಗ್ರಾಮದ ಗಂಟಿಹೊಳೆ ಎಂಬಲ್ಲಿ‌ ನಡೆದಿದೆ. ಗಂಟಿಹೊಳೆ ಕೊಚ್ಲುಗದ್ದೆಯ ಕರುಣಾಕರ ಪೂಜಾರಿ ಎಂಬುವವರ ಪುತ್ರಿ ಸಮನ್ವಿ (7 ವರ್ಷ) ಮೃತ ದುರ್ದೈವಿ.

ಸಮನ್ವಿ

ಉಪ್ಪುಂದ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಸಮನ್ವಿ, ಬುಧವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳಲು ಸಿದ್ಧಳಾಗಿ ತಾಯಿಯೊಂದಿಗೆ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೇ ರಿಕ್ಷಾದಲ್ಲಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಬಾಲಕಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ಬಾಲಕಿ ಚಾಕೊಲೇಟ್ ಜೊತೆಗೆ ಅದರ ಕವರ್ ನುಂಗಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಮರಣೋತ್ತರ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version