Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು – 10ನೇ ವರ್ಷದ ಟ್ರಸ್ಟ್ ದಿನಾಚರಣೆ, ಸನ್ಮಾನ, ಧನಸಹಾಯ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಮಕ್ಷತ್ರಿಯ ಸಮಾಜ ಸಣ್ಣ ಸಮುದಾಯವಾಗಿದ್ದು, ಸಮಾಜದಲ್ಲಿ ಗುರುತಿಸುವಂತೆ ಬೆಳೆದು ನಿಲ್ಲುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ನಾವು ಬೆಳೆಯುತ್ತಾ ನಮ್ಮಿಂದಾದ ಸಹಕಾರವನ್ನು ಸಮಾಜಕ್ಕೆ ನೀಡುತ್ತಾ ಬದುಕುವ ಗುಣ ಮುಖ್ಯ ಎಂದು ಮಂಗಳೂರು ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷರಾದ ಜೆ.ಕೆ. ರಾವ್ ಹೇಳಿದರು.

ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು ಇದರ 10ನೇ ವರ್ಷದ ಟ್ರಸ್ಟ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭೂಮಿಯ ಮೇಲೆ ಬಾಡಿಗೆಗೆ ಬಂದವರು ಎಂಬ ಅರಿವಿದ್ದರೇ ಪರಸ್ಪರ ಸಹಾಯದ ಮನೋಭಾವ ನಮ್ಮದಾಗುತ್ತದೆ ಎಂದ ಅವರು ಆಧುನಿಕ ಸಮಾಜದ ಜಂಜಾಟದ ನಡುವೆ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಖೇದಕರ. ವಿದ್ಯಾವಂತರಾಗುವಂತೆ ಸಂಬಂಧಗಳನ್ನು ಗಟ್ಟಿಗೊಳಿಸುವ ಗುಣವೂ ವಿದ್ಯಾರ್ಥಿಗಳಲ್ಲಿ ಬೆಳೆಯಲಿ ಎಂದರು.

ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದ ಅಭ್ಯುದಯಕ್ಕಾಗಿ ಒಂದು ದಶಕದ ಹಿಂದೆ ಆರಂಭವಾದ ಟ್ರಸ್ಟ್ ಇಂದು ಹತ್ತಾರು ಮಂದಿಗೆ ಆರ್ಥಿಕ ನೆರವು, ಸರಹಕಾರ ನೀಡಿದೆ. ಮನೆ, ಬೆಳಕು, ಶೈಕ್ಷಣಿಕ ದತ್ತು ಸ್ವೀಕಾರದಂತಹ ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಂಡು ನಿಶ್ಚಿತ ಗುರಿ ತಲುಪಲು ನೆರವು ನೀಡಿದೆ. ಇದರ ಪ್ರತಿಫಲವಾಗಿ ಟ್ರಸ್ಟ್ ಮೂಲಕ ನೆರವು ಪಡೆದವರು ಮರಳಿ ಟ್ರಸ್ಟಿಗೆ ನೆರವಾಗುತ್ತಿದ್ದಾರೆ. ಅಲ್ಲದೇ ನೆರವು ಕೇಳಿ ಬರುವ ಅರ್ಜಿಗಳು ಕಡಿಮೆಯಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಮುಂಬೈ ರಾಮರಾಜಕ್ಷತ್ರಿಯ ಸಂಘದ ಅಧ್ಯಕ್ಷ ಗಣಪತಿ ಬಿ. ಮುಂಬೈ, ಕುಂದಾಪುರ ವಿಭಾಗ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ., ಬೆಂಗಳೂರು ಕದಂಬ ಗ್ರೂಪ್ ಆಫ್ ಹೋಟೆಲ್ಸ್ ಕೃಷ್ಣಮೂರ್ತಿ ಎನ್. ವಿ., ಉಡುಪಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶಂಕರ ಪಟವಾಲ್, ರಾಮಕ್ಷತ್ರಿಯ ಪತ್ರಿಕೆ ಸಂಪಾದಕರಾದ ಬಿ. ಎಂ. ನಾಥ್ ಬೆಂಗಳೂರು, ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ. ಅತಿಥಿಗಳಾಗಿದ್ದರು.

ಬೈಂದೂರು ರಾಮಕ್ಷತ್ರಿಯ ಸಮುದಾಯದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ 13 ವಿದ್ಯಾರ್ಥಿಗಳು, ಪಿಯುಸಿಯ 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 16 ವಿದ್ಯಾರ್ಥಿಗಳಿಗೆ ಧನಸಹಾಯ, 2 ಅನಾಥ ಮಕ್ಕಳಿಗೆ ನೆರವು, 2 ಕುಟುಂಬಕ್ಕೆ ಗೃಹ ಹಸ್ತಾಂತರ, ಒಂದು ಕುಟುಂಬಕ್ಕೆ ವಿದ್ಯುತ್ ದೀಪದ ನೆರವು ನೀಡಲಾಯಿತು. ಪ್ರತಿವರ್ಷದಂತೆ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ ಪುಸ್ತಕ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರಾದ ಅಶೋಕ್ ಬೆಟ್ಟಿನ್, ಜೆ.ಕೆ. ರಾವ್, ಗಣಪತಿ ಬಿ. ಮುಂಬೈ, ಶ್ರೀಕಾಂತ್ ಕೆ., ಶಂಕರ ಪಟವಾಲ್, ಕೃಷ್ಣಮೂರ್ತಿ ಎನ್. ವಿ., ಬಿ. ಎಂ. ನಾಥ್ ಹಾಗೂ ಟ್ರಸ್ಟ್ ಸಂಚಾಲಕರಾದ ಆನಂದ ಮದ್ದೋಡಿ, ಕೇಶವ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ರಾಮಕ್ಷತ್ರಿಯ ಮಾತೃಮಂಡಳಿ ಭಜನಾ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಗ್ಗೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸುರಭಿ ಬೈಂದೂರು ಸಂಸ್ಥೆಯ ನಾಟಕ ದೆಹಲಿ ಕನ್ನಡ ಸಂಘದಲ್ಲಿ ಆಯ್ಕೆಯಾದ ಬಗ್ಗೆ ಪದಾಧಿಕಾರಿಗಳನ್ನು ಗೌರವಿಸಲಾಯಿತು. ದೇಣಿಗೆ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.

ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್, ಅಶೋಕ್ ಕುಮಾರ್ ಬಾಡ, ಅಕ್ಕಿಅಂಗಡಿ ಶ್ರೀನಿವಾಸ ಮಾಸ್ಟರ್, ಗೋಪಾಲಕೃಷ್ಣ ಕಲ್ಮಕ್ಕಿ, ಪದ್ಮನಾಭ ಕೊತ್ವಾಲ್, ವೆಂಕಟೇಶ ಕೆ.ಟಿ. ಬಿಜೂರು, ಚಂದ್ರಶೇಖರ ಕೆ. ಕೋಟೇಶ್ವರ, ಕೃಷ್ಣಯ್ಯ ವಿ. ಮದ್ದೋಡಿ, ಬಿ. ಶ್ರೀಧರ್ ಪಡುವರಿ, ಪಿ. ಶ್ರೀಧರ್ ಪಡುವರಿ, ಸುಧಾಕರ ಹೊಸಾಡು ಉಪಸ್ಥಿತರಿದ್ದರು.

ಟ್ರಸ್ಟ್ ಸಂಚಾಲಕ ಆನಂದ ಮದ್ದೋಡಿ ವಾರ್ಷಿಕ ವರದಿ ವಾಚಿಸಿದರು. ಬೈಂದೂರು ರಾಮಕ್ಷತ್ರಿಯ ಮಾತೃಮಂಡಳಿ ಸದಸ್ಯರು ಪ್ರಾರ್ಥಿಸಿದರು. ಶಿಕ್ಷಕರಾದ ಗಣಪತಿ ಹೋಬಳಿದಾರ್ ಸಂದೇಶ ವಾಚಿಸಿದರು. ಟ್ರಸ್ಟೀ ವೆಂಕಟರಮಣ ಬಿಜೂರು ಸ್ವಾಗತಿಸಿದರು. ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಕೇಶವ ನಾಯ್ಕ್ ವಂದಿಸಿದರು. ಭಾಸ್ಕರ ಬಾಡ, ರವಿರಾಜ್ ಮಯ್ಯಾಡಿ, ವೆಂಕಟರಮಣ ಮಯ್ಯಾಡಿ, ರಾಘವೇಂದ್ರ ತಗ್ಗರ್ಸೆ, ದಿನಕರ ಪಟವಾಲ್ ಮೊದಲಾದವರು ಸಹಕರಿಸಿದರು.

Exit mobile version