Kundapra.com ಕುಂದಾಪ್ರ ಡಾಟ್ ಕಾಂ

ಕಾವ್ಯ ಕಡಮೆ ಅವರ ‘ಮಾಕೋನ ಏಕಾಂತ’ ಸಂಕಲನಕ್ಕೆ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
2022ನೇ ಸಾಲಿನ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಲೇಖಕಿ ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ದೊರೆತಿದೆ.

ಕನ್ನಡದ ಪ್ರಮುಖ ಲೇಖಕರುಗಳಾದ ಡಾ. ಕೆ.ವೈ.ನಾರಾಯಣ ಸ್ವಾಮಿ, ರೇಣುಕಾ ನಿಡಗುಂದಿ, ಕಮಲಾಕರ ಭಟ್ ಕಡವೆ ಇವರುಗಳು ಪ್ರಶಸ್ತಿ ಆಯ್ಕೆಯ ನಿರ್ಣಾಯಕರಾಗಿ ಸಹಕರಿಸಿದ್ದಾರೆ. ಪ್ರಶಸ್ತಿ ಹದಿನೈದು ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ 13ರಂದು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013 ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’ ನಾಟಕಗಳ ಸಂಕಲನ. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ,’ ಯುವ ಬರಹಗಾರರಿಗೆ ನೀಡುವ ಟೋಟೋ ಪುರಸ್ಕಾರ, ನಾಟಕ ಅಕಾಡೆಮಿಯ ನಾಟಕ ಬಹುಮಾನ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.

Exit mobile version