Kundapra.com ಕುಂದಾಪ್ರ ಡಾಟ್ ಕಾಂ

ಕರ್ಕಾಟಕ ಅಮವಾಸ್ಯೆ: ಮರವಂತೆ ಮಾರಸ್ವಾಮಿಯಲ್ಲಿ ಸಮುದ್ರ ಸ್ನಾನ; ಜನಜಾತ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ನದಿ-ಕಡಲ ಸಂಗಮದ ಅಪೂರ್ವ ತಾಣ ಮರವಂತೆಯ ಪುರಾಣ ಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಸಮುದ್ರ ಸ್ನಾನ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು.

ನಸುಕಿನಿಂದಲೇ ಆಸುಪಾಸಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮರವಂತೆಗೆ ಆಗಮಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಾಚೆಗಿನ ಸಮುದ್ರದಲ್ಲಿ ಸ್ನಾನಗೆ„ದು ಬಳಿಕ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಸ್ನಾನಗೈದು ಶ್ರೀದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಹಾಗೂ ಸ್ಥಳೀಯ ಭಾಗದ ಮೀನುಗಾರರು (ಮರವಂತೆ) ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು.

ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ಸುಮಾರು ಅರ್ಥ ಕಿ.ಮೀ. ವರೆಗೂ ದೇವಸ್ಥಾನದಿಂದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಗಂಗೊಳ್ಳಿ ಕುಂದಾಪುರ ಪೊಲೀಸರು ಬಿಗಿ ಬಂದೋವಸ್ತ್ ಏರ್ಪಡಿಸಿದ್ದರು.

Exit mobile version