Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪದವಿ ಅಂಕಪಟ್ಟಿ, ಮೌಲ್ಯಮಾಪನ ವಿಳಂಬ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪದವಿ ಪರೀಕ್ಷಾ ಫಲಿತಾಂಶ ಅಂಕಪಟ್ಟಿ, ಮೌಲ್ಯಮಾಪನ ಸೇರಿದಂತೆ ವಿವಿಧ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಕುಂದಾಪುರ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಭಂಡಾರ್‌ಕಾರ್ಸ್ ಕಾಲೇ ಜು ಎಬಿವಿಪಿ ಮುಖಂಡ ವಿತೇಶ್ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಪದವಿ ಶಿಕ್ಷಣದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ದೊರೆಯದೇ ಕ್ಯಾಂಪಸ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ನಾಲ್ಕೈದು ದಿನಗಳಲ್ಲಿ ಅಂಕಪಟ್ಟಿ ಒದಗಿಸಿಕೊಡದಿದ್ದರೆ ಮಂಗಳೂರು ವಿವಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಷ್ಠಿತ ಕಂಪನಿಗಳು ನಡೆಸಿದ ಕ್ಯಾಂಪಸ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಕಪಟ್ಟಿಸಲ್ಲಿಸಲಾಗದೆ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆಗಸ್ಟ್ ೩ ರಂದು ಪ್ರಕಟವಾದ ತೃತೀಯ ಹಾಗೂ ಪಂಚಮ ಸೆಮಿಸ್ಟರ್ ಫಲಿತಾಂಶದಲ್ಲಿ ಸಾಕಷ್ಟು ಲೋಪದೋಷಗಳಿದೆ. ಪ್ರಥಮ ಸೆಮಿಸ್ಟರ್ ಮೌಲ್ಯಮಾಪನ ಆಮೆಗತಿಯಲ್ಲಿ ಸಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಮನವಿ ಸ್ವೀಕರಿಸಿ, ಸ್ಥಳದಲ್ಲಿ ಮಂಗಳೂರು ವಿವಿ ರಿಜಿಸ್ಟಾರ್ ಜೊತೆ ದೂರವಾಣಿಯಲ್ಲಿ ಮಾತನಾಡಿ, ಅಂಕಪಟ್ಟಿ ಈಗಾಗಲೇ ಬಂದಿದ್ದು, ತಕ್ಷಣ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತದೆ. ಕ್ಯಾಂಪಸ್‌ನಲ್ಲಿ ಆಯ್ಕೆಯಾಗಿದ ಯಾವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ ಅವರು ವಿವಿಗೆ ಮನವಿ ಮಾಡಿದರೆ ಯಾವ ಕಂಪನಿಗೆ ಆಯ್ಕೆಯಾಗಿದ್ದರೋ ಅಂತಾ ಕಂಪನಿ ಜೊತೆ ಮಾತನಾಡಿ ಒಂದಿಷ್ಟು ಸಮಯದ ಅವಕಾಶ ಮಾಡಿಕೊಡಲಾಗುತ್ತದೆ. ಒಂದಿಷ್ಟು ಲೆಚ್ಚರರ್ ಮೌಲ್ಯಮಾಪನಕ್ಕೆ ಬಾರದಿರುವುದರಿಂದ ಸಮಸ್ಯೆ ಆಗಿದ್ದು, ಅದನ್ನು ಸರಿಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದು, ರಿಜಿಸ್ಟಾರ್ ಮಾತನಾಡಿರುವುದು ವಿದ್ಯಾರ್ಥಿಗಳಿಗೂ ಕೇಳಿಸಿದರು.

ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜು, ಕೋಟೇಶ್ವರ ವರದರಾಜ್ ಶೆಟ್ಟಿ ಪ್ರಥಮದರ್ಜೆ ಕಾಲೇಜು, ಬಸ್ರೂರು ಶ್ರೀ ಶಾರದಾ ಕಾಲೇಜು, ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜು, ಎಸ್‌ಎಂಎಸ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಬಿವಿಪಿ ಮುಖಂಡರಾದ ಭಂಡಾರ್‌ಕಾರ‍್ಸ್ ಕಾಲೇಜಿನ ವಿದ್ಯಾರ್ಥಿಗಳಾದ ವಿತೇಶ್ ಶೆಟ್ಟಿ, ವಿಘ್ನೇಶ್, ವೀಕ್ಷಿತ್, ಬಸ್ರೂರು ಶ್ರೀ ಶಾರದಾ ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್, ದೀಪಾ, ನಿಶಾನ್, ವೈಭವಿ, ರಂಜಿತ್, ವಿಘ್ನೇಶ್, ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ದರ್ಶನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Exit mobile version