Kundapra.com ಕುಂದಾಪ್ರ ಡಾಟ್ ಕಾಂ

ಚಪ್ಪರಿಕೆ: ಹಳ್ಳಕ್ಕೆ ಬಿದ್ದು ನಾಪತ್ತೆಯಾದ ಬಾಲಕಿಗಾಗಿ ಮುಂದುವರಿದ ಶೋಧ, ಮನೆಯಲ್ಲಿ ಆಕ್ರಂದನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.8:
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿಗಾಗಿ, ಎಡಮಾವಿನ ಹೊಳೆಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮನೆಗೆ ತೆರಳುತ್ತಿದ್ದಾಗ, ಶಾಲೆಗೆ ಸಮೀಪದ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕ ದಾಟುವಾಗ ಬಾಲಕಿ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಈ ಹಳ್ಳ ಎಡಮಾವಿನ ಹೊಳೆ ಸೇರುತ್ತಿದ್ದು, ವಿಷಯ ತಿಳಿದ ತಕ್ಷಣ ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದರು.

ನಿತ್ಯವೂ ಬೊಳ್ಳಂಬಳ್ಳಿ ಭಾಗದಿಂದ ಚಪ್ಪರಿಕೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳುತ್ತಿದ್ದು, ಮಳೆ ಹೆಚ್ಚಿದ್ದರಿಂದ ಬೇಗನೆ ಶಾಲೆ ಬಿಡಲಾಗಿತ್ತು. ಶಾಲೆಯ ಸಮೀಪವೇ ಇದ್ದ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಸ್ಥಳೀಯರೊರ್ವರು ಮಕ್ಕಳನ್ನು ಕಾಲುಸಂಕ ದಾಟಲು ನೆರವಾಗಿದ್ದಾರೆ. ಮೂವರು ವಿದ್ಯಾರ್ಥಿಗಳ ಕಾಲುಸಂಕ ದಾಟಿದ್ದು, ಸನ್ನಿಧಿ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲು ಜಾರಿದೆ. ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ತೇಲಿ ಹೋಗಿದ್ದಾಳೆ ಎನ್ನಲಾಗಿದೆ.

ಮುಂದುವರಿದ ಶೋಧ ಕಾರ್ಯ:
ನಾಪತ್ತೆಯಾಗಿರುವ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸಂಜೆಯ ತನಕ ಬಾಲಕಿಯ ಸುಳಿವು ದೊರೆತಿಲ್ಲ. ಬೈಂದೂರು ಅಗ್ನಿಶಾಮಕದಳದ ಸಿಬ್ಬಂದಿಗಳು ಶೋಧಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.

ಮನೆಯಲ್ಲಿ ಆಕ್ರಂದನ:
ಸನ್ನಿಧಿ ತಂದೆ ಪ್ರದೀಪ ಪೂಜಾರಿ ನಾಯ್ಕನಕಟ್ಟೆಯಲ್ಲಿ ರಿಕ್ಷಾ ಚಾಲಕರಾಗಿದ್ದು, ತಾಯಿ ಸುಮಿತ್ರಾ ಗೃಹಿಣಿಯಾಗಿದ್ದಾಳೆ. ದಂಪತಿಗೆ ಸನ್ನಿಧಿ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

15ಕ್ಕೂ ಹೆಚ್ಚು ಕಾಲುಸಂಕವಿದೆ:
ಕಾಲ್ತೋಡು ಗ್ರಾಮದ ಚಪ್ಪರಿಕೆ, ಬೋಳಂಬಳ್ಳಿ ಭಾಗದಲ್ಕಿ 15ಕ್ಕೂ ಹೆಚ್ಚು ಕಾಲುಸಂಕವಿದ್ದು, ಈ ಭಾಗದ ಜನರು ಹಾಗೂ ಒಂದಷ್ಟು ವಿದ್ಯಾರ್ಥಿಗಳು ನಿತ್ಯ ಸಂಚಾರಕ್ಕೆ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಬೊಳಂಬಳ್ಳಿಯಿಂದ ಕಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಬದಲು ಮಾರ್ಗವಿದ್ದರೂ, ಕಾಲುಸಂಕವಿರುವ ದಾರಿ ಚಪ್ಪರಿಕೆ ಭಾಗಕ್ಕೆ ತೆರಳಲು ಹತ್ತಿರವಿರುವುದರಿಂದ ಇದೇ ಮಾರ್ಗದಲ್ಲಿ ತೆರಳುತ್ತಾರೆ. 60ಕ್ಕೂ ಹೆಚ್ಚು ಕುಟುಂಬಗಳು ಶಾಲೆಯ ಸಮೀಪದ ಕಾಲುಸಂಕವನ್ನೇ ಅವಲಂಭಿಸಿದ್ದಾರೆ. ಕಿರುಸೇತುವೆಗಾಗಿ ಸಾಕಷ್ಟು ಭಾರಿ ಬೇಡಿಕೆ ಇರಿಸಿದ್ದರೂ ಈವರೆಗೂ ಅದು ಈಡೇರಿಲ್ಲ. ಸ್ಥಳೀಯರೇ ಅಲ್ಲಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮರದ ಸಂಕ ನಿರ್ಮಿಸಿಕೊಂಡಿದ್ದರು.

ಘಟನಾ ಸ್ಥಳಕ್ಕೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಡಿವೈಎಸ್ಪಿ ಶ್ರೀಕಾಂತ್, ತಹಶೀಲ್ದಾರ್ ಕಿರಣ್ ಗೋರಯ್ಯ, ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಬೈಂದೂರು ಬಿಇಓ ನಾಗೇಶ್ ನಾಯ್ಕ್, ಪಿ.ಎಸ್.ಐ ಪವನ್ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

ದನ್ನೂ ಓದಿ:
► ಬೋಳಂಬಳ್ಳಿ: ಕಾಲುಸಂಕ ದಾಟುತ್ತಿದ್ದ ವಿದ್ಯಾರ್ಥಿನಿ ನೀರುಪಾಲು, ಬಾಲಕಿಗಾಗಿ ತೀವ್ರ ಶೋಧ – https://kundapraa.com/?p=61296 .

Exit mobile version