Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಪಕ್ಷವೆಂದರೆ ಈ ದೇಶದ ಇತಿಹಾಸವೇ ಆಗಿದೆ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಳೆದ 75 ವರ್ಷಗಳಲ್ಲಿ ಬಡವರು, ದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಕಾಂಗ್ರೆಸ್ ಎಂದರೆ ಈ ದೇಶದ ಇತಿಹಾಸವೇ ಆಗಿದೆ. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳೇ ಕೊರತೆ ಇದ್ದ, ಬಡವರೇ ಇದ್ದ ದೇಶದಲ್ಲಿ ಎಲ್ಲರ ಬದುಕು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂಬುದನ್ನು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಟೀಕಿಸುವವರು ಅರಿತುಕೊಳ್ಳಬೇಕಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಕಾಲ್ನಡಿಗೆ ಜಾಥಾ | ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವ

ಅವರು ಬುಧವಾರ ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ, ಬಳಿಕ ಬೈಂದೂರು ಅಂಬೇಡ್ಕರ್ ಭವನದಲ್ಲಿ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅನೇಕ ಮಹಾನ್ ಪುರುಷರುಗಳು ಕುಟುಂಬವನ್ನು ತ್ಯಾಗ ಮಾಡಿ, ಬ್ರಿಟೀಷರ ಬಂದೂಕಿಗೆ ಎದೆಯನ್ನು ಕೊಟ್ಟು, ಜೈಲುವಾಸ ಮಾಡಿ ಹೋರಾಟ ಮಾಡಿ ದಕ್ಕಿಸಿಕೊಂಡದ್ದು ಭಾರತ ಸ್ವಾತಂತ್ರ್ಯ. ವಿವಿಧ ಧರ್ಮ, ಜಾತಿ, ಭಾಷೆಯನ್ನು ಒಳಗೊಂಡು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನವನ್ನು ಪಾಲಿಸಿಕೊಂಡು ದೊಡ್ಡ ರಾಷ್ಟ್ರರಾಗಿ ಭಾರತ ಬೆಳೆದು ನಿಂತಿದೆ.

ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟ ಸಾವರ್ಕರ್ ಅವರನ್ನು ಪೂಜಿಸುವ, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಗೌರವಿಸುವ ಬಿಜೆಪಿ ಪಕ್ಷ ಇಂದು ಅಮೃತ ಮಹೋತ್ಸವ ಆಚರಿಸುತ್ತಿರುವುದು ನಮ್ಮ ದುರಾದೃಷ್ಟ. ಧರ್ಮ, ಜಾತಿಯ ನಡುವೆ ದ್ವೇಷ ಮನೋಭಾವ ಬಿತ್ತಿ ರಾಜಕೀಯ ಲಾಭವನ್ನು ಪಡೆಯವ ಕೆಲಸವನ್ನು ಮಾಡುತ್ತಿರುವ ಬಿಜೆಪಿ, ದೇಶವನ್ನು ಮತ್ತೆ ಅವನತಿಯತ್ತ ಕೊಂಡೊಯ್ಯುತ್ತಿದೆ ಎಂದರು.

ಮಾಜ ಶಾಸಕ ಕೆ. ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ದೇಶ ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಕಾಲ್ನಡಿಗೆ ಜಾಥಾವನ್ನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಉಡುಪಿ ಜಿಲ್ಲಾ ಉಸ್ತುವಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಎಸ್. ರಾಜು ಪೂಜಾರಿ, ವಾಸುದೇವ ಯಡಿಯಾಳ್, ರಘುರಾಮ ಪೂಜಾರಿ, ವಿಜಯ ಶೆಟ್ಟಿ, ಎಸ್. ಪ್ರಕಾಶ್ವಂದ್ರ ಶೆಟ್ಟಿ, ರಮೇಶ್ ಗಾಣಿಗ, ನಾಗರಾಜ ಗಾಣಿಗ ಬಂಕೇಶ್ವರ, ಗೌರಿ ದೇವಾಡಿಗ, ದೀಪಕ್ ಕೋಟ್ಯಾನ್, ಶೇಖರ ಪೂಜಾರಿ, ಮಣಿಕಂಠ ದೇವಾಡಿಗ, ತಬ್ರೇಜ್ ನಾಗೂರು, ಶಾಂತಿ ಪಿರೇರಾ, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ ಕುಮಾರ್ ಉಪ್ಪುಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ ದೇವಾಡಿಗ ವಂದಿಸಿದರು.

Exit mobile version