Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂ ಅಭ್ಯುದಯ ಸಂಘದ ‘ಶ್ರಾವಣ ಸಂಧ್ಯಾ’ ಕಾರ್ಯಕ್ರಮ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾವುಂದದ ಹಿಂದೂ ಅಭ್ಯುದಯ ಸಂಘದ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಸಂಧ್ಯಾ ಕಾರ್ಯಕ್ರಮ ನಡೆಯಿತು.

ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಪ್ರಾರಂಭದಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಮಕ್ಕಳು ಚಂಡಿಕಾ ಪಾರಾಯಣದಲ್ಲಿ ಬರುವ ದೇವಿ ಸ್ತುತಿಗಳನ್ನು, ಸ್ಫುಟವಾಗಿ ಪಠಿಸಿದರು. ನಂತರ ಕಮಲಶಿಲೆಯ ಪೂರ್ಣಿಮಾ ಎನ್. ಭಟ್ ಅವರು ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಅವುಗಳ ಮಹತ್ವ ದ ಬಗ್ಗೆ ಸಂಪ್ರದಾಯಿಕ ಹಾಡುಗಳನ್ನು ಹೇಳುತ್ತಾ ಸವಿವರವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ವಿದ್ಯಾರ್ಥಿಗಳಿಂದ ಸುಮಧುರವಾದ ಭಕ್ತಿ ರಸಮಂಜರಿ ಕಾರ್ಯಕ್ರಮ, ಆಗಮಿಸಿದ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತು, ರೋಮಾಂಚನಗೊಳಿಸಿತು.

ಕುಟುಂಬ ಸಮೇತ ಭಾಗವಹಿಸಿದ್ದ ಸಾರ್ವಜನಿಕರಲ್ಲಿ ಮೂರು ಕುಟುಂಬಗಳನ್ನು, ಅದೃಷ್ಟ ಚೀಟಿ ಎತ್ತುವುದರ ಮೂಲಕ ಆಯ್ಕೆಮಾಡಿ, ಅಭಿನಂದಿಸಲಾಯಿತು. ವಾಸುದೇವ ಗಾಣಿಗ, ಸುಬ್ಬಯ್ಯ ದೇವಾಡಿಗ ಮತ್ತು ಪ್ರಶಾಂತ ಗಾಣಿಗ ದಂಪತಿಗಳೇ ಆ ಮೂರು ಅದೃಷ್ಟಶಾಲಿಗಳು. ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಮಹಿಳೆಯರಿಗೆ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರ ಪತ್ನಿಯಂದಿರು, ಮಂಗಳ ಸಂಕೇತದ ಅರಶಿನ, ಕುಂಕುಮ, ಹೂ, ಬಳೆ ಮತ್ತು ರವಿಕೆ ಕಣಗಳನ್ನು ನೀಡಿ, ಸತ್ಕರಿಸಿದರು.

ಸಂಘದ ಅಧ್ಯಕ್ಷರಾದ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರೆ, ಉಪಾಧ್ಯಕ್ಷ ಮನೋಹರ ಎನ್. ಕೆ. ವಂದಿಸಿದರು.

ಕಾರ್ಯದರ್ಶಿ ಎ. ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸತ್ಯನಾರಾಯಣ ಗಾಣಿಗ, ಅಭಿಷೇಕ್, ರತ್ನಾಕರ ಕೆ., ವಿಘ್ನೇಶ್ವರ ಕೆ., ವಿ.ಭಾಸ್ಕರ ಶೆಟ್ಟಿ, ಸುದರ್ಶನ ಗಾಣಿಗ, ಮಹೇಂದ್ರ ಪೂಜಾರಿ, ಶೀನ ಕೆ. ಪೂಜಾರಿ ಇವರುಗಳು ಕಾರ್ಯಕ್ರಮದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಿದರು.

Exit mobile version