ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕುಂಭಾಶಿ ವಿನಾಯಕ ನಗರದ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ ನಗರದಲ್ಲಿಯೇ ವಾಸವಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ.
ಜುಲೈ 29ರಂದು ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಅವರ ಕುಟುಂಬ ಸಮೇತ ಪಂಡರಾಪುರ ಮತ್ತು ಶಿರಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಗೆ ತೆರಳಿದ್ದರು. ಈ ವೇಳೆ ಸುಭಾಶ್ಚಂದ್ರ ಆಚಾರ್ಯ ಮನೆಯ ಬಾಗಿಲನ್ನು ಒಡೆದು ಕಪಾಟಿನಲ್ಲಿರಿಸಿದ 27 ಗ್ರಾಂ ಚಿನ್ನಾಭರಣ ಮತ್ತು 13,500 ರೂ. ನಗದು ಹಣವನ್ನು ಕಳವು ಮಾಡಿದ್ದರು.
ಇದೀಗ ಆರೋಪಿಯನ್ನು ಬಂಧಿಸಿರುವ ಪೋಲೀಸರು ಆತನಿಂದ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 1,610 ರೂ. ನಗದು ಸ್ವಾಧೀನವಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಸುಭಾಶ್ಚಂದ್ರ ಆಚಾರ್ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ತನ್ನ ಮನೆಯ ಸಮೀಪದ ಮನೆ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಕಳವು ಕೃತ್ಯದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಈತನ್ಮಧ್ಯೆ ಈತನ ಬ್ಯಾಂಕ್ ಖಾತೆಗೆ 20 ಸಾವಿರ ಹಣ ವರ್ಗಾವಣೆ ಕೂಡ ಆಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡಿದ್ದು ನಿಗಾವಹಿಸಿ ತಾಂತ್ರಿಕ ಸಹಾಯದ ಮೂಲಕ ಇನ್ನಷ್ಟು ನಿಖರಗೊಳಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆ ಈತನ ಮೇಲೆ ಯಾವುದೇ ಅಪರಾಧ ಕೃತ್ಯಗಳಿಲ್ಲ.
ಉಡುಪಿ ಎಸ್ಪಿ ವಿಷ್ಣವರ್ಧನ್ ಎನ್. ಹಾಗೂ ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ ಹಾಗೂ ಕಾನೂನು ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್ ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆದಳ ತಂಡದ ಸಿಬ್ಬಂದಿಗಳಾದ ಸಂತೋಷ ಕುಮಾರ್ ಕೆ.ಯು, ಸಂತೋಷ ಕುಮಾರ್, ರಾಘವೇಂದ್ರ ಬೈಂದೂರು, ಅವಿನಾಶ್, ರಾಮ ಪೂಜಾರಿ ಕಾರ್ಯಾಚರಣೆಯಲ್ಲಿದ್ದರು.