Kundapra.com ಕುಂದಾಪ್ರ ಡಾಟ್ ಕಾಂ

ಹೆಮ್ಮಾಡಿ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕಿ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೈಕ್ ಹಿಂಬದಿ ಸೀಟಿನಲ್ಲಿ ಕುಳಿತು ಶಾಲೆಗೆ ತೆರಳುತ್ತಿದ್ದಾಗ ದನ ಅಡ್ಡಬಂದು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರ ಗಾಯೊಂಡಿದ್ದ ಶಿಕ್ಷಕ ಗುರುವಾರ ತಡರಾತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ (32) ಮೃತ ದುರ್ದೈವಿ.

ಗುರುವಾರ ಬೆಳಿಗ್ಗೆ ಎಂದಿನಂತೆ ಮುದೂರು ಸೆಳ್ಕೋಡು ನಿವಾಸಿ, ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಶ್ರೀಕಾಂತ್ ಅವರೊಂದಿಗೆ ಬೈಕಿನಲ್ಲಿ ಮನೆಯಿಂದ ಹೊರಟಿದ್ದರು. ವಂಡ್ಸೆ ಸಮೀಪ ಏಕಾಏಕಿ ರಸ್ತೆಯಲ್ಲಿ ದನ ಅಡ್ಡಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಸ್ಕಿಡ್ ಆಗಿ ಬಿದ್ದಿದ್ದಾರೆ. ಶ್ರೀಕಾಂತ್ ಅವರಿಗೆ ಸಣ್ಣಪಟ್ಟು ಗಾಯಗಳಾಗಿದ್ದರೇ, ಹಿಂಬದಿಯಲ್ಲಿ ಕುಳಿತಿದ್ದ ಅಂಬಿಕಾ ಅವರಿಗೆ ತಲೆ ಭಾಗಕ್ಕೆ ಪೆಟ್ಟು ಬಿದ್ದತ್ತು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

2018ರಲ್ಲಿ ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅಂಬಿಕಾ ಅವರು ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅವರಿಗೆ ಒಂದೂವರೆ ವರ್ಷ ಮಗುವಿತ್ತು.

ಮೃತರಿಗೆ ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರಾದ ವಿ. ದಿವಾಕರ ಹಾಗೂ ಶಿಕ್ಷಕವೃಂದ, ಎಸ್ಡಿಎಂಸಿ ಸಮಿತಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Exit mobile version