Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ, ಶೇ.13 ಡಿವಿಡೆಂಡ್ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.17:
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯು ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಇಂದು ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಮಾತನಾಡಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿಂದಿನ ಸಾಲಿನಲ್ಲಿ ರೂ 256 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ರೂ. 1.05 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 13 ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ ರೂ 47.32 ಕೋಟಿ ಠೇವಣಿ ಹೊಂದಿ, ಸದಸ್ಯರಿಗೆ ರೂ. 40.09 ಕೋಟಿ ಸಾಲ ನೀಡಿದೆ. ಅದರಲ್ಲಿ ರೂ. 10.08 ಕೋಟಿ ಮೊತ್ತದ ಕೃಷಿ ಸಾಲವನ್ನು ಸಂಘವು ನೀಡಿದೆ ಎಂದರು.

ಕೃಷಿ ಹಾಗೂ ಹೈನುಗಾರಿಕೆಗೆ ಸಾಲ ನೀಡಿ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ. ಸಂಸ್ಥೆಯ ನಿರಂತರವಾಗಿ ಪ್ರಗತಿಯ ಪಥದಲ್ಲಿದ್ದು ಸದಸ್ಯರಿಗೂ ಬಡ್ಡಿಯಲ್ಲಿ ಕಡಿತ, ವಿವಿಧ ಮಾಹಿತಿ ಕಾರ್ಯಕ್ರಮಗಳು, ವಿದ್ಯಾಭ್ಯಾಸದಲ್ಲಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ಕೈಗೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ ಇದ್ದರು.

ಈ ಸಂದರ್ಭ ನೂತನ ಬಡಾಕೆರೆ ಶಾಖೆಯಲ್ಲಿ ಉತ್ತಮ ಠೇವಣಿ ಹಾಗೂ ಸಾಲ ವಸೂಲಾತಿ ಮಾಡಿದ ಶಾಖಾ ಪ್ರಬಂಧಕ ರತ್ನಾಕರ ಬಿಲ್ಲವ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ವ್ಯಾಪ್ತಿಯ ಸದಸ್ಯರ ಮಕ್ಕಳಿಗೆ ಧನಸಹಾಯ ವಿತರಿಸಲಾಯಿತು. ಸಂಘದ ಸದಸ್ಯರು ಪ್ರಾರ್ಥಿಸಿದರು. ನಿರ್ದೇಶಕ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವರದಿ, ಆಯವ್ಯಯ ವಿವರ ನೀಡಿದರು. ಮರವಂತೆ ಶಾಖಾಧಿಕಾರಿ ಸೋಮಯ್ಯ ಬಿಲ್ಲವ ನಿರೂಪಿಸಿದರು.

Exit mobile version