Kundapra.com ಕುಂದಾಪ್ರ ಡಾಟ್ ಕಾಂ

‘ಮಾದಕ ವ್ಯಸನದ ದುಷ್ಪರಿಣಾಮಗಳು & ಅಪರಾಧ ಮುಕ್ತ ಸಮಾಜ’ – ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೈಂದೂರು ಘಟಕದ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ‘ಮಾದಕ ವ್ಯಸನದ ದುಷ್ಪರಿಣಾಮಗಳು ಮತ್ತು ಅಪರಾಧ ಮುಕ್ತ ಸಮಾಜ’ ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು.

ಭ್ರಷ್ಟಾಚಾರ ನಿಗ್ರಹ ದಳದ ವೃತ್ತ ನಿರೀಕ್ಷಕರಾದ ವಿನಾಯಕ ಬಿಲ್ಲವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಯುವಜನತೆ ವ್ಯಸನಮುಕ್ತ ಸಮಾಜ ಕಂಡುಕೊಳ್ಳುವ ಬಗೆ, ವಿವಿಧ ರೀತಿಯ ಮಾದಕ ವ್ಯಸನಗಳು, ವ್ಯಸನದಿಂದಾಗಿ ದುಶ್ಚಟಗಳಿಂದಾಗಿ ವ್ಯಕ್ತಿಯೋರ್ವ ಹೇಗೆ ಅಪರಾಧಗಳಿಗೆ ಬಲಿಯಾಗುತ್ತಾನೆ, ಅಲ್ಲದೆ ವ್ಯಸನಗಳಿಗಾಗಿ ಅಪರಾಧಗಳು ನಡೆಯುವ ಬಗೆ, ಡ್ರಗ್ಸ್ ಗಳಿಂದಾಗಿ ಮನುಷ್ಯನ ಮೇಲೆ ಪ್ರಭಾವ ಬೀರುವ ಅಂಶಗಳು, ಅದರಿಂದಾಗುವ ದುಷ್ಪರಿಣಾಮಗಳ ಕುರಿತು ರಾಜ್ಯದ ಮೂಲೆ ಗಳಲ್ಲಿ ದಾಖಲಾಗಿರುವ ಕೇಸ್ ಸಹಿತ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅಪರಾಧಮುಕ್ತ ಸಮಾಜ ನಿರ್ಮಾಣ ಮತ್ತು ಮಾದಕ ವ್ಯಸನಗಳ ಅರಿವಿನ ಕುರಿತು ಮಾಹಿತಿ ನೀಡಿದರು.

ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ಮಾತನಾಡಿ, ಅತಿ ಹೆಚ್ಚು ಪ್ರಮಾಣದ ಮಾದಕ ವ್ಯಸನ ಪ್ರಕ್ರಿಯೆಗಳು ಯುವಜನತೆಯಲ್ಲಿ ಹೆಚ್ಚು ಕಂಡು ಬರುತ್ತಿರುವುದರಿಂದ ಈ ಕುರಿತು ಜನಜಾಗೃತಿಯನ್ನು ಯುವ ಜನತೆಯಲ್ಲಿ ಮೂಡಿಸುವ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಶ್ಲಾಘನೀಯ ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಅಧಿಕಾರಿ ಡಾ ಶಿವಕುಮಾರ್ ಪಿ.ವಿ., ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ನಾಗರಾಜ್ ಶೆಟ್ಟಿ, ಲತಾ ಪೂಜಾರಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಬೈಂದೂರಿನ ಖಜಾಂಜಿ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಬೈಂದೂರಿನ ಸಭಾಪತಿಗಳಾದ ನಿತಿನ್ ಶೆಟ್ಟಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ಬಿಎ ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿದರು. ತೃತೀಯ ಬಿ.ಎ ಸುಷ್ಮಿತಾ ವಂದಿಸಿದರು ಹಾಗೂ ತೃತೀಯ ಬಿಎ ವಿದ್ಯಾರ್ಥಿನಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು

Exit mobile version