Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್: ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಹಕಾರಿ ಸಂಸ್ಥೆಯ ಲಾಭ ಗಳಿಸುವ ಜೊತೆಗೆ ಸಾಮಾಜಿಕ ಕಾರ್ಯಗಳಿಗೆ ಅದನ್ನು ವಿನಿಯೋಗಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದು ಶ್ಲಾಘನಾರ್ಹ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

ಅವರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ವತಿಯಿಂದ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯಿಂದ ಪ್ರೋತ್ಸಾಹ ಪಡೆದವರು ಅದನ್ನು ನೆನಪಿಸಿರಿಸಿಕೊಂಡು ಹೆಚ್ಚಿನ ಸಾಧನೆ ಮಾಡುವಂತಾಗಬೇಕು ಮತ್ತು ಅದು ಮತ್ತೊಬ್ಬರಿಗೆ ಸ್ಪೂರ್ತಿಯಾಗಬೇಕು ಎಂದ ಅವರು ಶ್ರೀ ರಾಮ ಸೌಹಾರ್ದ ಸಂಸ್ಥೆ ಕಳೆದ ಒಂದು ದಶಕದಿಂದ ಜನಮಾನಸದಲ್ಲಿ ಗುರುತಿಸುವಂತ ಕಾರ್ಯ ಮಾಡುತ್ತಿದೆ ಎಂದರು.

ಈ ವೇಳೆಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧಕ ಗುರುರಾಜ ಪೂಜಾರಿ ಹಾಗೂ ಸೈನ್ಯಕ್ಕೆ ಸೇರ್ಪಡೆಗೊಂಡ ಉಡುಪಿ ಜಿಲ್ಲೆಯ ಪ್ರಥಮ ಯುವತಿ ವಿದ್ಯಾ ಗೌಡ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅನಾರೋಗ್ಯ ಸಮಸ್ಯೆಯುಳ್ಳು 30ಕ್ಕೂ ಹೆಚ್ಚು ಸಂತ್ರಸ್ಥ ಕುಟುಂಬಗಳಿಗೆ ನೆರವು ಒದಗಿಸಲಾಯಿತು.

ಈ ಸಂದರ್ಭ ಮುಂಬೈ ವಕೀಲರಾದ ವೆಂಕಟೇಶ್, ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಎಂ. ವಿನಾಯಕ ರಾವ್ ನಿರ್ದೇಶಕರುಗಳಾದ ಮಂಜು ಪೂಜಾರಿ ನಾವುಂದ, ಮಂಜುನಾಥ ಪೂಜಾರಿ, ರಾಮಕೃಷ್ಣ ಖಾರ್ವಿ, ಶಿವರಾಮ ಪೂಜಾರಿ, ಅಣ್ಣಪ್ಪ ಪೂಜಾರಿ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ಕೆ. ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕರುಗಳಾದ ರಾಜೇಂದ್ರ ದೇವಾಡಿಗ, ರಾಘವೇಂದ್ರ ಪೂಜಾರಿ, ಶ್ರೀನಿವಾಸ ಹಾಗೂ ಪ್ರಶಾಂತ್ ಸಹಕರಿಸಿದರು.

Exit mobile version