Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ 84ನೇ ಹುಟ್ಟುಹಬ್ಬ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರಿನ ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಅವರು 84ನೇ ಹುಟ್ಟುಹಬ್ಬವನ್ನು ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಿರೂರಿನಲ್ಲಿ ಪ್ರತ್ಯೇಕವಾಗಿ ಮಂಗಳವಾರ ಅವರ ಅಭಿಮಾನಿಗಳು ಆಚರಿಸಿದರು.

ಮಾದರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಸುಂದರ ಜೀವನ ರೂಪಿಸಿಕೊಳ್ಳುವುದಕ್ಕೆ ವಿದ್ಯಾರ್ಥಿ ಜೀವನ ಅಮೂಲ್ಯ ಅವಕಾಶ. ಉತ್ತಮ ನಡವಳಿಕೆ ಮೂಲಕ ಅದರ ಸದುಪಯೋಗಪಡಿಸಿಕೊಳ್ಳಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸದಾಶಿವ ಡಿ. ಪಡುವರಿ, ಶಾಲಾ ಅಭಿವೃದ್ಧಿ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸಂಜಯ್ ದೇವಾಡಿಗ, ಸಿಟಿ ಜೆಸಿಐನ ಪೂರ್ವಾಧ್ಯಕ್ಷರಾದ ಶ್ರೀಧರ ಆಚಾರ್ಯ, ಶಾಲಾ ಅಭಿವೃದ್ಧಿ ಸಮಿತಿಯ ಭಾಸ್ಕರ್ ದೇವಾಡಿಗ, ದಯಾನಂದ ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಸರಸ್ವತಿ ಸ್ವಾಗತಿಸಿದರು. ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ದನ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ವೀಣಾ ಹೆಗಡೆ ವಂದನಾರ್ಪಣೆ ಸಲ್ಲಿಸಿದರು ಬೈಂದೂರು ವಲಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಕಾರ್ಯಕ್ರಮ ಸಂಯೋಜಿಸಿದ್ದರು.

ಶಿರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ. ಬಾಬು ಶೆಟ್ಟಿ ತಗ್ಗರ್ಸೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸದಾಶಿವ ಡಿ. ಪಡುವರಿ, ಪುಪ್ಪರಾಜ ಶೆಟ್ಟಿ, ಎಪಿಎಂಸಿಯ ವೆಂಕಟ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಅತುಲ್ ಕುಮಾರ್ ಶೆಟ್ಟಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ನಿಕಟಪೂರ್ವ ಕಾರ್ಯದರ್ಶಿ ರವೀಂದ್ರ ಗಂಗೊಳ್ಳಿ, ಜಿಲ್ಲಾ ಭಗವದ್ದೀತಾ ಅಭಿಯಾನದ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಟಿ. ನಾರಾಯಣ ಹೆಗ್ಡೆ, ಉಡುಪಿ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಮೊದಲಾದವರು ಅಭಿನಂದನೆ ಸಲ್ಲಿಸಿದರು.

Exit mobile version