Kundapra.com ಕುಂದಾಪ್ರ ಡಾಟ್ ಕಾಂ

ಸರಕಾರಿ ಪ್ರಥಮ ದರ್ಜೆ ಕಾಲೇಜು ಜಾಗ ಒತ್ತುವರಿಗೆ ಯತ್ನ. ಪ್ರಭಾವಿಗಳ ಕೈವಾಡ?

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು,ಸೆ.04:
ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕಂದಾಯ ಇಲಾಖೆಯಿಂದ ಮರು ಸರ್ವೇ ನಡೆಸಿ ಅನಧಿಕೃತವಾಗಿ ಹಾಕಲಾಗಿದ್ದ ಶೆಡ್’ಗಳನ್ನು ತೆರವುಗೊಳಿಸಲಾಗಿದೆ.

ಬೈಂದೂರು ಪ್ರಥಮ ದರ್ಜೆ ಕಾಲೇಜಿಗೆ ಸೇರಿದ 12 ಎಕರೆ ಜಾಗದಲ್ಲಿ ಅಕ್ರಮ ಒತ್ತುವರಿಗೆ ಪ್ರಯತ್ನಿಸಿರುವುದು ಕಂಡುಬಂದಿದೆ. ಏಕಾಏಕಿ 10ಕ್ಕೂ ಹೆಚ್ಚು ಗುಡಿಸಲು ನಿರ್ಮಿಸಿರುವುದು ಹಾಗೂ ಗಿಡಗಳನ್ನು ಕಡಿದು ಅಲ್ಲಲ್ಲಿ ಗಡಿ ಗುರುತು ಮಾಡಿರುವುದು ಕಾಲೇಜು ಆಡಳಿತದ ಗಮನಕ್ಕೆ ಬಂದಿತ್ತು. ತಕ್ಷಣ ಬೈಂದೂರು ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಬಳಿಕ ಸರ್ವೆಯನ್ನು ನಡೆಸಲಾಗಿತ್ತು. ಕಾಲೇಜಿಗೆ ಸಂಬಂಧಪಟ್ಟ ಜಾಗಕ್ಕೆ ಮತ್ತೆ ಗಡಿ ಗುರುತು ನಿಗದಿಪಡಿಸಿ ಅಕ್ರಮ ಗುಡಿಸಲನ್ನು ಸರ್ವೇ ಅಧಿಕಾರಿಗಳು ಕಿತ್ತುಹಾಕಿದ್ದಾರೆ. ಕಾಲೇಜು ಜಾಗಕ್ಕೆ ಅಕ್ರಮ ಪ್ರವೇಶಿಸಿ ವಾಸ್ತವ್ಯ ಹೂಡಿ ಹಕ್ಕುಪತ್ರ ಪಡೆಯಲು ಹೊರಟಿರುವ ಹುನ್ನಾರದ ಹಿಂದೆ ಪ್ರಭಾವಿಗಳ ಕೈವಾಡವಿದೆ ಎನ್ನುವ ಶಂಕೆಯಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಬೈಂದೂರು ವಿದ್ಯಾನಗರದ ಸರ್ವೆ ನಂಬರ್ 336ರಲ್ಲಿ ದಾಖಲೆಯ ಪ್ರಕಾರ 53.53 ಎಕ್ರೆ ಸರಕಾರಿ ಭೂಮಿಯಿದ್ದು, ಇದರಲ್ಲಿ 25 ಎಕರೆ ಜಾಗವನ್ನು 1983ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಿರಿಸಲಾಗಿತ್ತು. 2020ರಲ್ಲಿ 25 ಎಕರೆ ಜಾಗವನ್ನು ಮರು ವಿಂಗಡನೆ ಮಾಡಿ 12 ಎಕರೆ ಪ್ರದೇಶವನ್ನು ಪ್ರಥಮ ದರ್ಜೆ ಕಾಲೇಜಿಗೆ, 10 ಎಕರೆ ಪ್ರದೇಶವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಹಾಗೂ 3 ಎಕರೆಯನ್ನು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕಾಗಿ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಪ್ರತ್ಯೇಕಿಸಿ ಮೀಸಲಿರಿಸಲಾಗಿತ್ತು. ಇದೀಗ ಕಾಲೇಜಿಗೆ ಸೇರಿದ 12 ಎಕರೆ ಪ್ರದೇಶದಲ್ಲಿ ಅಕ್ರಮ ಒತ್ತುವರಿಗೆ ಪ್ರಯತ್ನಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಘಟನೆಯ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಪ್ರತಿಕ್ರಿಯಿಸಿ, ಸರಕಾರಿ ದಾಖಲೆಯಲ್ಲಿ ಇರುವಂತೆ ಕಾಲೇಜಿಗೆ ಸಂಬಂಧಿಸಿದ ಜಾಗ ಅಕ್ರಮ ಒತ್ತುವರಿಯ ಹುನ್ನಾರ ನಡೆದಿರುವುದು ತಿಳಿದ ತಕ್ಷಣ ಮತ್ತೆ ಸರ್ವೆ ಕಾರ್ಯ ನಡೆಸಿ ಗಡಿ ಗುರುತು ಮಾಡಿಸಲಾಗಿದೆ. ಬೈಂದೂರು ತಾಲೂಕಿನ ಏಕೈಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಾಗ ಅತಿಕ್ರಮಣ ಸರಿಯಲ್ಲ. ಕಾಲೇಜು ವಿಸ್ತರಣೆ, ಉನ್ನತ ಶಿಕ್ಷಣ ಕೇಂದ್ರ, ವಿದ್ಯಾರ್ಥಿಗಳ ಹಾಸ್ಟೆಲ್ ಮೊದಲಾದವುಗಳು ಆಗುವುದಿದ್ದರೆ, ಕಾಲೇಜಿಗೆ ಮೀಸಲಿರಿಸಿದ ಜಾಗ ಬೇರೆ ಉದ್ದೇಶಕ್ಕೆ ಒಳಕೆಯಾದರೆ ಅಭಿವೃದ್ಧಿಗೆ ತೊಡಗಲಾಗಲಿದೆ ಎಂದಿದ್ದಾರೆ./ಕುಂದಾಪ್ರ ಡಾಟ್ ಕಾಂ ವರದಿ/

Exit mobile version