Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯುವವರೆಗೂ ವಿರಮಿಸುವುದಿಲ್ಲ: ಬಿ. ಎಸ್. ಯಡಿಯೂರಪ್ಪ

ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ವಂದಿಸುವ ಬದಲಿಗೆ, ತಮ್ಮದೇ ದರ್ಬಾರಿನಲ್ಲಿ ಮುಳುಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ಅವರು ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ – ಶೆಟ್ರಕಟ್ಟೆಯಲ್ಲಿ ಹಾಗೂ ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರದಲ್ಲಿ ನಡೆದ ಎರಡನೇ ಹಂತದ ರೈತಚೈತನ್ಯ ಯಾತ್ರೆಯನ್ನು ಉದ್ಘಾಟಿಸಿ ಮಾತಾನಾಡಿದರು.

ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸಿದ್ದರಾಮಯ್ಯನವರ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ರೈತರ ನೋವಿಗೆ ಸ್ಪಂದಿಸಲು ಬಿಜೆಪಿ ಅಧಿಕಾರಕ್ಕೆ ಬಂದರೇ ಮಾತ್ರ ಸಾಧ್ಯ. ರಾಜ್ಯ ಸರಕಾರವನ್ನು ಕಿತ್ತೆಸೆದು ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಸುವರ್ಣ ಯುಗವನ್ನಾಗಿಸುವಲ್ಲಿ ಪ್ರಯತ್ನಗಳು ಸಾಗುತ್ತಿದೆ. ಅದು ಪೂರ್ಣಗೊಳ್ಳುವ ತನಕ ತಾನು ವಿರಮಿಸುವುದಿಲ್ಲ ಎಂದವರು ನುಡಿದರು.

ರಾಜ್ಯದ 123 ತಾಲೂಕುಗಳಲ್ಲಿ ಬರಗಾಲ ಇರುವುದನ್ನು ಒಪ್ಪಿಕೊಂಡಿರುವ ಸರಕಾರ, ರೈತರ ಸಾಲದ ಬಡ್ಡಿಯನ್ನು ಮಾತ್ರ ಮನ್ನಾ ಮಾಡದೇ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ ಅವರು ಕರಾವಳಿಯಲ್ಲಿ ಸಿಹಿನೀರು ಮರಳುಗಾರಿಕೆಗೆ ಸರಕಾರ ಅನುವು ಮಾಡಿಕೊಡಬೇಕು ಅಲ್ಲದೇ ಮರಳು ನೀತಿಯನ್ನು ಸರಿಪಡಿಸಿ ಮರಳು ದಂಧೆಯನ್ನು ನಿಲ್ಲಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಹಳ್ಳಿಗಳೂ ಸ್ಮಾರ್ಟ್ ಆಗಬೇಕು ಎಂದರೇ ಪ್ರಯೋಜನವಿಲ್ಲ. ಕಾರ್ಯರೂಪಕ್ಕಿಳಿಸಬೇಕು:
ನಗರಗಳು ಸ್ಮಾರ್ಟ್‌ ಸಿಟಿಗಳಾದರೆ ಪ್ರಯೋಜನವಿಲ್ಲ, ಹಳ್ಳಿಗಳೂ ಕೂಡ ಸ್ಮಾರ್ಟ್‌ ಆಬೇಕು ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾನು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಸುಮಾರು 5,000 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿ ಅಭಿವೃದ್ಧಿ ನಡೆಸಿರುವುದನ್ನು ಮುಖ್ಯಮಂತ್ರಿ ಗಮನಿಸಬೇಕಾಗಿದೆ. ರಾಜ್ಯದ 5,625 ಗ್ರಾ.ಪಂ.ಗಳಗೆ ಕೇಂದ್ರ ಸರಕಾರದ ಅನುದಾನದ ಹೊರತಾಗಿ ಪ್ರತಿವರ್ಷ ಒಂದು ಕೋಟಿ ಅನುದಾನವನ್ನು ರಾಜ್ಯ ಸರಕಾರ ನೀಡಿದರೆ ಐದು ವರ್ಷಗಳಲ್ಲಿ ಎಲ್ಲ ಗ್ರಾಮಗಳು ನಗರ ಪ್ರದೇಶಗಳಿಗೆ ಸರಿಸಮನಾಗಿ ಬೆಳೆದು ನಿಲ್ಲಲಿವೆ.

ಕುಂದಾಪುರ ಹಾಗೂ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್‌, ಮಾಜಿ ಸಚಿವ ಶ್ರೀರಾಮುಲು, ಶಾಸಕ ಸುನೀಲ್‌ ಕುಮಾರ್‌ ಕುಮಾರ್‌, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಮಾಜಿ ಶಾಸಕ ರಘುಪತಿ ಭಟ್‌, ಮೈಸೂರು ಮಾಜಿ ಶಾಸಕ ವಿಜಯ ಶಂಕರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ವಿಧಾನ ಪರಿಷತ್‌ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಉದಯ ಕುಮಾರ್‌ ಶೆಟ್ಟಿ, ಮಟ್ಟಾರ್‌ ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಶ್ಯಾಮಲಾ ಕುಂದರ್‌, ಗೀತಾಂಜಲಿ ಸುವರ್ಣ, ಜಿ.ಪಂ. ಸದಸ್ಯೆ ಇಂದಿರಾ ಶೆಟ್ಟಿ, ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಬಿಜೆಪಿ ಮುಖಂಡರಾದ ಕುಮಾರಸ್ವಾಮಿ, ಗುರುರಾಜ್‌ ಗಂಟಿಹೊಳೆ, ಶಂಕರ ಅಂಕದಕಟ್ಟೆ, ಮಹೇಶ್ ಪೂಜಾರಿ, ರಾಜೀವ ಶೆಟ್ಟಿ, ರಾಘವೇಂದ್ರ ನೆಂಪು, ಸುರೇಶ್‌ ಶೆಟ್ಟಿ, ಸುರೇಶ್‌ ನಾಯಕ್‌, ಗೋಪಾಲಕೃಷ್ಣ ಕಲ್ಮಕ್ಕಿ, ಸದಾನಂದ ಶೇರೇಗಾರ್‌, ಸತೀಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Exit mobile version