Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬಂಟರ ಯಾನೆ ನಾಡವರ ಸಂಘ: ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬಂಟ ಸಮಾಜದ ಇವತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಶೈಕ್ಷಣಿಕವಾಗಿ ಸಮಾಜ ಜಾಗೃತವಾದಗ ಮಾತ್ರ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯವಿದೆ. ಸಮುದಾಯವನ್ನು ಒಂದುಗೂಡಿಸುವ ದೃಷ್ಠಿಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಜೌಚಿತ್ಯ ಪೂರ್ಣವಾಗಿದೆ ಎಂದು ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ಯಡ್ತರೆ ಬಂಟರ ಭವನದಲ್ಲಿ ಬೈಂದೂರು ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಬೆಂಗಳೂರು ಬಂಟರ ಸಂಘದ ದಾನಿಗಳ ಸಹಯೋಗದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ರಾಮಕೃಷ್ಣ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉತ್ತಮ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಓದಿನಲ್ಲಿಯೂ ಒಂದು ಶಿಸ್ತು ಅಳವಡಿಸಿಕೊಂಡಿರುತ್ತಾರೆ. ಅದರಂತೆಯೇ ಬದುಕಿನ ರೀತಿಯನ್ನು ಓದಿಗೆ ಅನುಕೂಲವಾಗುವಂತೆ ಬದಲಿಸಿಕೊಂಡಿರುತ್ತಾರೆ. ಅಂತವರಿಗೆ ಯಶಸ್ಸು ಕೂಡಲೇ ಒಲಿಯುತ್ತದೆ. ಈ ಯಶಸ್ಸಿನತ್ತ ಎಲ್ಲಾ ಮಕ್ಕಳು ಹೆಜ್ಜೆಯಿಡುವಂತಾಗಬೇಕು. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನದ ಅಗತ್ಯತೆ ಇದೆ. ವಿದ್ಯಾರ್ಥಿವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ಹೆಚ್ಚಿನ ಲಾಭ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ತರಬೇತಿ ಪಡೆದುಕೊಳ್ಳಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ನಮ್ಮ ಜೀವನ ಉತ್ತಮವಾಗಲು ಸಾಧ್ಯ ಎಂದರು.

ಬೈಂದೂರು ಬಂಟರ ಸಂಘದ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಆನಂದ ರಾಮ ಶೆಟ್ಟಿ ವಿದ್ಯಾರ್ಥಿವೇತನ ವಿತರಿಸಿದರು. ಉದ್ಯಮಿ ಅಶೋಕ ಶೆಟ್ಟಿ ಬೆಳ್ಳಾಡಿ ಪ್ರತಿಭಾ ಪುರಸ್ಕಾರ ನೀಡಿದರು. ನೈಲಾಡಿ ಭವಾನಿ ಮಂಜಯ್ಯ ಶೆಟ್ಟಿ ಟ್ರಸ್ಟ್ ವತಿಯಿಂದ ಆರೋಗ್ಯ ನೀಧಿ ಸಹಾಯಧನ ವಿತರಿಸಲಾಯಿತು. ಬೈಂದೂರು ಬಂಟರ ಸಂಘದ ಗೌರವಾಧ್ಯಕ್ಷ ಚುಚ್ಚಿ ನಾರಾಯಣ ಶೆಟ್ಟಿ, ಬೆಂಗಳೂರು ಸಂಘದ ಅಜಿತ್ ಶೆಟ್ಟಿ, ಬಂಟ್ಸ್ ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಂಟ್ಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಕೆ. ಶೆಟ್ಟಿ, ಕುಂದಾಪುರ ಮಾತೃ ಸಂಘದ ಸುಧಾಕರ ಶೆಟ್ಟಿ ವೇದಿಕೆಯಲ್ಲಿದ್ದರು. ಬೈಂದೂರು ಬಂಟರ ಸಂಘದ ಕಾರ್ಯದರ್ಶಿ ಜಗದೀಶ ಶೆಟ್ಟಿ ಕುದ್ರುಕೋಡು ಸ್ವಾಗತಿಸಿ, ವಿದ್ಯಾರ್ಥಿವೇತನ ಸಮಿತಿ ಸಂಚಾಲಕ ಗಂಟಿಹೊಳೆ ಮಂಜುನಾಥ ಶೆಟ್ಟಿ ಪ್ರಾಸ್ತಾವಿಸಿದರು. ಖಜಾಂಚಿ ಚಿತ್ತೂರು ಮಂಜಯ್ಯ ಶೆಟ್ಟಿ ವಂದಿಸಿದರು. ಆರ್.ಜೆ. ನಯನಾ ನಿರೂಪಿಸಿದರು.

Exit mobile version