Kundapra.com ಕುಂದಾಪ್ರ ಡಾಟ್ ಕಾಂ

ನೀಟ್‌ನಲ್ಲಿ ಕಡಿಮೆ ಅಂಕ: ಮನನೊಂದ ವಿದ್ಯಾರ್ಥಿ ಹೊಳೆಗೆ ಹಾರಿ ಆತ್ಮಹತ್ಯೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಹೇರಿಕುದ್ರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಯಲ್ಲಿ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕುಂದಾಪುರದ ವಡೇರಹೋಬಳಿ ಜೆ.ಎಲ್.ಬಿ ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಎಂಬುವರ ಮಗ ಸಾಯೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಸಾಯೀಶ್ ಶೆಟ್ಟಿ ಶಿವಮೊಗ್ಗದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದ. ಆದರೆ ಫಲಿತಾಂಶದಲ್ಲಿ ತೀರಾ ಕಡಿಮೆ ಅಂಕ ಬಂದಿರುವುದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಮಧ್ಯಾಹ್ನದ ವೇಳೆಗೆ ಸೈಕಲ್ಲಿನಲ್ಲಿ ಸೇತುವೆ ಬಳಿ ಬಂದ ಸಾಯೀಶ್, ಸೈಕಲ್ ಹಾಗೂ ಮೊಬೈಲನ್ನು ಸೇತುವೆ ಬದಿಯಲ್ಲಿ ಇಡುತ್ತಿದ್ದಾಗ ಸ್ಥಳೀಯರು ಕೆಲವರು ನೋಡಿದ್ದಾರೆ. ನೋಡ ನೋಡುತ್ತಿದ್ದಂತೆ ನದಿಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ತಿಳಿದು ಕುಂದಾಪುರ ಪೊಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರು ವಿದ್ಯಾರ್ಥಿಯ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟವೂ ಹೆಚ್ಚಾಗಿರುವ ಕಾರಣ ಆತನನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ. ಸಂಜೆಯ ತನಕ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿಲ್ಲ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
► ಕುಂದಾಪುರ: ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಮೃತದೇಹ ನಾವುಂದದಲ್ಲಿ ಪತ್ತೆ – https://kundapraa.com/?p=61984 .

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಒತ್ತಡ, ಸಮಸ್ಯೆಗಳಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅಥವಾ ಆಪ್ತಸಮಾಲೋಚಕರನ್ನು ಸಂಪರ್ಕಿಸಿ

Exit mobile version