Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನದಿಂದ ಕನ್ನಡ ಕಲೆ ಸಂಸ್ಕೃತಿ ಉಳಿವಿಗೆ ಮಹತ್ತರ ಕೊಡುಗೆ – ಡಾ. ಜಿ. ಎಲ್. ಹೆಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ ಕನ್ನಡ ಭಾಷೆ ಬಳಕೆ ಹಾಗೂ ಕನ್ನಡ ಸಂಸ್ಕೃತಿ ಉಳಿಸುವ ಅತ್ಯಾದ್ಬುತ ಕೆಲಸ ಯಕ್ಷಗಾನ ರಂಗದಿಂದ ಆಗುತ್ತಿದೆ. ಭಾರತೀಯ ಪಾರಂಪರಿಕ, ಸಂದೇಶ ಯುವಕರಿಗೆ ಯಕ್ಷಗಾನ ಕೊಡುತ್ತಿದೆ. ಯಕ್ಷಗಾನ ಕೇವಲ ಕರಾವಳಿ ಕಲೆಯಲ್ಲ ಇಡೀ ಕರ್ನಾಟಕದ ಕಲೆಯಾಗಿದೆ ಎಂದರು.

ಸಾವಿರ ಕುಟುಂಬಗಳಿಗೆ ಯಕ್ಷಗಾನ ಕಲೆ ಅನ್ನ ಕೊಡುವುದಷ್ಟೇ ಅಲ್ಲದೆ ಮಾತು ಕಲಿಸುವ ಕಲೆಯಾಗಿದೆ. ವೇಷಭೂಷಣ, ಭಾಷೆ, ನೃತ್ಯ, ಹಿಮ್ಮಳೆ, ಹಾಡುಗಾರಿಕೆ ಎಲ್ಲಾವನ್ನೂ ಒಳಗೊಂಡ ಕಲೆ ವಿಶ್ವದಲ್ಲಿ ಒಂದಿದೆ ಎಂದರೆ ಅದು ಯಕ್ಷಗಾನ ಕಲೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಪಟ್ಲ ಸತೀಶ್ ಶೆಟ್ಟಿ,ಕೃಷ್ಣ (ಕುಷ್ಟ) ಗಾಣಿಗ ಕೋಡಿ, ಕೋಲ್ಯಾರು ರಾಜು ಶೆಟ್ಟಿ, ಉಮೇಶ್ ಭಟ್ ಬಾಡ, ಅಜಿತ್ ಕುಮಾರ್ ಜೈನ್ ಮಾತನಾಡಿದರು.

ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಪ್ರಶಸ್ತಿ ಪುರಸ್ಕೃತರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಆಜ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಕುಲಾಲ್ ಹಿರಿಯ ಕಲಾವಿದ ಪದ್ಮನಾಭ ಶೆಟ್ಟಿಗಾರ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಕಾಡೆಮಿ ಸದಸ್ಯರುಗಳಾದ ಸುರೇಶ್ ನಾಯ್ಕ್, ಆರತಿ ಪಟ್ರಮೆ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟಾರ್ ಎಸ್.ಎಚ್. ಶಿವರುದ್ರಪ್ಪ ಪ್ರಸ್ತಾವಿಕ ಮಾತನಾಡಿದರು. ಅಕಾಡೆಮಿ ಸದಸ್ಯರಾದ ದಿವಾಕರ ಹೆಗಡೆ ಸ್ವಾಗತಿಸಿ, ಕೆ.ಎಂ. ಶೇಖರ ಕಾರ‍್ಯಕ್ರಮ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಬ್ರಿಟನ್ ರಾಣಿಗೆ ಸಂತಾಪ ಸೂಚಿಸಿದರು.

Exit mobile version