ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.17: ತಾಲೂಕಿನ ಶಿರೂರು ಟೋಲ್ ಬಳಿ ವಿಶ್ರಾಂತಿಗಾಗಿ ಚಾಲಕ ಲಾರಿ ನಿಲ್ಲಿಸಿದ್ದ ಸಂದರ್ಭ ಅದರ ಟಯರ್’ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮತ್ತು ತಂಡ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದೆ.
ಸೆ.14ರ ರಾತ್ರಿ ಶಿರೂರು ಟೋಲ್ ಬಳಿ ನಿಲ್ಲಿಸಲಾಗಿದ್ದ 16 ಚಕ್ರದ ಟಾಟಾ ಲಾರಿಯ, 1.85 ಲಕ್ಷ ಮೌಲ್ಯದ 5 ಚಕ್ರಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಎರಡೇ ದಿನದಲ್ಲಿ ಆರೋಪಿಗಳಾದ ಮಹಾರಾಷ್ಟದ ಶ್ಯಾಮ ಶಂಕರ ಶಿಂಧೆ (24), ಆಕಾಶ್ ಬಪ್ಪ ಶಿಂಧೆ (19), ಅಮೂಲ್ ರಾಮ ಕಾಳೆ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಇತರ ಠಾಣೆಗಳಲ್ಲಿ ಬೇರೆ ಬೇರೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಆರೋಪಿತರಿಂದ ಕಳವಾದ ಚಕ್ರ 5 ಒಟ್ಟು ಮೌಲ್ಯ 1,85,000/- ಹಾಗೂ ಕೃತ್ಯಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ಲಾರಿ ಮೌಲ್ಯ 35,00,000/- ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ 36,85,000/- ಸ್ವಾಧೀನಪಡಿಸಿಕೊಂಡಿರುತ್ತಾರೆ.
ಆರೋಪಿ ಪತ್ತೆ ಕಾರ್ಯಚರಣೆಯುಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್.ಐ. ನಿರಂಜನ ಗೌಡ ಬಿ.ಎಸ್., ತನಿಖೆ ಪಿ.ಎಸ್.ಐ. ಮಹೇಶ ಕಂಬಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೋಹನ ಪೂಜಾರಿ, ನಾಗೇಂದ್ರ, ಸುಜಿತ್ ಕುಮಾರ್ , ಅಶೋಕ ರಾಥೋಡ್, ವಿಕ್ರಂ, ಪ್ರವೀಣ್ ಹಾಗೂ ಜಿಲ್ಲಾ ಸಿ.ಡಿ.ಆರ್ ವಿಭಾಗದ ತಾಂತ್ರಿಕ ಸಿಬ್ಬಂದಿ ದಿನೇಶ ಭಾಗವಹಿಸಿದ್ದರು.