Kundapra.com ಕುಂದಾಪ್ರ ಡಾಟ್ ಕಾಂ

ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ: ಸೋಮೇಶ್ವರ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.18:
ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್ಎಸ್ಎಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಜತೆಗೂಡಿ ಬೈಂದೂರು ಸೋಮೇಶ್ವರ ಕಡಲ ತೀರದಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಸೋಮೇಶ್ವರ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ವಿವಿಧ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ 300 ಅಧಿಕ ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಬೈಂದೂರು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಾದ ಕಮಲ, ಸುವರ್ಣ, ಉಮೇಶ್, ಹರೀಶ್ ಹಾಗೂ ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗಿನಿಂದಲೂ ಎಲ್ಲೆಡೆಯೂ ಸ್ವಚ್ಛತೆಯ ಅರಿವು ಮೂಡಿದೆ. ಅವರ ಜನ್ಮದಿನದ ದಿನವೇ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿರುವುದು ಸಂತಸ ತಂದಿದೆ. ಅಭಿಯಾನ ನಿರಂತವಾಗಿ ನಡೆಯಲಿ ಎಂದರು.

ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಕೇದಾರನಾಥ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಯುವರಾಜ್ ಕೆ.ಪಿ., ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್, ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್. ಉದಯ ಆಚಾರ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು, ರೆಡ್ ಕ್ರಾಸ್ ಬೈಂದೂರು ಘಟಕದ ಸಭಾಪತಿ ನಿತೀಶ್ ಶೆಟ್ಟಿ, ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್, ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಮಂಜುನಾಥ್ ನಾಯ್ಕ್, ಉಪಪ್ರಾಂಶುಪಾಲರಾದ ಪದ್ಮನಾಭ, ರೋಟರಿ ಲಿಟರಸಿ ಪ್ರೆಸಿಡೆಂಟ್ ಐ. ನಾರಾಯಣ, ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯರಾದ ರಾಜು ಎಸ್., ಬೈಂದೂರು ಶಿಶುಮಂದಿರದ ಮಂಜುನಾಥ ಶೆಟ್ಟಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್’ನ ಭರತ್ ಬಂಗೇರ, ಎಸ್.ಎಫ್.ಎಲ್ ಇಂಡಿಯಾದ ದಿನೇಶ್ ಸಾರಂಗ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘಟಿಸಿದ ಅನುದೀಪ್ ಹೆಗ್ಡೆ ಸ್ವಾಗತಿಸಿ, ಮಿನುಷಾ ಕಾಂಚನ್ ವಂದಿಸಿದರು. ಪತ್ರಕರ್ತರಾದ ಸುನಿಲ್ ಹೆಚ್. ಜಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಸುಶಾಂತ್ ಬೈಂದೂರು ಸಹಕರಿಸಿದರು.

Exit mobile version