Kundapra.com ಕುಂದಾಪ್ರ ಡಾಟ್ ಕಾಂ

ಕಸಾಪಗೆ ನೂರರ ಸಂಭ್ರಮ: ನಾಗೂರಿನಲ್ಲಿ ಎರಡು ದಿನಗಳ ಕನ್ನಡ ವರ್ಷಾಚರಣೆಗೆ ಚಾಲನೆ

ಕನ್ನಡ ಕೃತಿಗಳಿಗೆ ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆ ಇದೆ: ಡಾ. ಯು.ಪಿ.ಉಪಾಧ್ಯಾಯ

ಬೈಂದೂರು: ಒಳ್ಳೆಯ ಕೃತಿಗಳಿಗೆ ಒಳ್ಳೆಯ ಓದುಗರು ಇದ್ದೇ ಇರುತ್ತಾರೆ. ಕನ್ನಡದಲ್ಲಿ ಉತ್ತಮ ಕೃತಿಗಳು ಹೊರಬರಬೇಕು. ಆ ಕೃತಿಗಳು ಓದುಗರಿಗೆ ಸಿಗುವಂತಾಗಬೇಕು. ಆಯಾಯ ವಯೋಮಾನದವರನ್ನು ಲಕ್ಷ್ಯವಾಗಿಸಿಟ್ಟುಕೊಂಡು ಕೃತಿಗಳನ್ನು ರಚನೆ ಮಾಡುವ ಪ್ರವೃತ್ತಿ ಬೆಳೆದಾಗ ಕನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಅಭಿಪ್ರಾಯಪಟ್ಟರು.

ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಂಬದಕೋಣೆ ಆರ್.ಕೆ.ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮದ ಅಂಗವಾಗಿ ಆರ್.ಕೆ.ಸಂಜೀವ ರಾವ್ ವೇದಿಕೆಯಲ್ಲಿ ನಡೆದ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ ಕಥೆ ಕಾದಂಬರಿ ಬರೆದವರು ಮಾತ್ರ ಸಾಹಿತಿಗಳೆಂದು ಪರಿಗಣಿಸಲಾಗದು. ಇತರ ಪ್ರಕಾರಗಳ ಬರಹಗಳು ಸಾಹಿತ್ಯದ ಸಾಲಿಗೆ ಸೇರುತ್ತದೆ. ಕನ್ನಡ ಸಾಹಿತ್ಯಕ್ಕೆ ಭಾರತದಲ್ಲಿ ದೊಡ್ಡ ಸ್ಥಾನಮಾನವಿದೆ. ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ಇದೆ. ಆದರೆ ಭಾಷಾ ತೊಡಕಿನಿಂದ ಅದು ಪ್ರಸರಣ ಆಗುತ್ತಿಲ್ಲ, ಎಲ್ಲರನ್ನೂ ತಲುಪುತ್ತಿಲ್ಲ. ರಾಜ್ಯದ ಲೇಖಕರಲ್ಲಿ ಕನಿಷ್ಠ 25 ಸಾಹಿತಿಗಳ ತಲಾ ಒಂದೊಂದು ಕೃತಿಯನ್ನಾದರೂ ಆಂಗ್ಲ ಭಾಷೆಗೆ ವಿಮರ್ಶೆಗಳ ಸಹಿತವಾಗಿ ತರ್ಜುಮೆ ಮಾಡಿ, ದೇಶದ ವಿವಿದೆಡೆ ಹಾಗೂ ವಿದೇಶಗಳಿಗೆ ಪ್ರಸರಣ ಮಾಡಿದರೆ ಕನ್ನಡ ಸಾಹಿತ್ಯದ ಮಹತ್ವ ಗೊತ್ತಾಗುತ್ತದೆ. ಕನ್ನಡದ ಸಾಹಿತ್ಯಗಳು ಅತ್ಯಂತ ಗಟ್ಟಿಯಾಗಿ, ಸಮೃದ್ಧವಾಗಿವೆ. ಅವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಾಗ ಕನ್ನಡದ ಹಿರಿಮೆ ಹೆಚ್ಚುತ್ತದೆ. ಅಂಥಹ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುವ ಅವಶ್ಯಕತೆ ಇದೆ ಎಂದರು.

ಕನ್ನಡದಲ್ಲಿ ಓದುಗರಿಗೆ ಕೊರತೆಯಿಲ್ಲ. ಲೇಖಕ ತನಗೆ ಖುಷಿಗಾಗಿ ಬರೆಯುವ ಬದಲು ಓದುಗರ ಅಭಿರುಚಿಗೆ ತಕ್ಕಂತೆ ಬರೆದರೇ ಅವರ ಕೃತಿಗಳು ಜನರಿಗೆ ತಲುಪುತ್ತದೆ ಹಾಗೂ ಅವರ ಸಾಹಿತ್ಯ ಸಮಾಜಕ್ಕೊಂದು ಸಂದೇಶ ನೀಡುತ್ತದೆ ಎಂದರು.

ವಿದೇಶಗಳಲ್ಲಿ ಬೆಳೆದಂತೆ ಇಲ್ಲಿ ಸಾಹಿತ್ಯ ಜನರನ್ನು ಪರಿಣಾಮಕಾರಿಯಾಗಿ ತಲುಪಿಲ್ಲ. ವಿದೇಶಗಳಲ್ಲಿ ಮಕ್ಕಳ ಕೃತಿಯೊಂದು ಬಿಡುಗಡೆಯಾಗುತ್ತದೆ ಎಂದರೆ ಮೊದಲೆ ಕಾಯ್ದಿರಿಸುವಿಕೆ ಹಾಗೂ ಬೆಳಿಗ್ಗೆ ಅಂಗಡಿಯ ಮುಂದೆ ಸರದಿ ಸಾಲು ಕಾಣುತ್ತೇವೆ. ಆವತ್ತೆ ಹೊಸ ಕೃತಿಯನ್ನು ಓದುವ ತುಡಿತವನ್ನು ಗಮನಿಸಬಹುದು. ಅಂಥಹ ಸಾಹಿತ್ಯ ಸೃಷ್ಟಿ ಕನ್ನಡದಲ್ಲೂ ಆಗಬೇಕು. ಕನ್ನಡದಲ್ಲಿ ಓದುವ ಆಸಕ್ತಿ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಇವತ್ತು ಕನ್ನಡದ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಮನ್ನಣೆ ಲಭಿಸುತ್ತಿದೆ. ಸಂಶೋಧನೆ, ಸೃಜನಶೀಲ ಸಾಹಿತ್ಯಕ್ಕೂ ಅವಕಾಶಗಳು ಸೃಷ್ಟಿಯಾಗುತ್ತಿವೆ. ಅಂತೆಯೇ ಸಾಹಿತಿಗಳು ಜನರ ಅಭಿರುಚಿ ಮತ್ತು ವಯೋಮಾನದವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸದಾಭಿರುಚಿಯ ಸಾಹಿತ್ಯ ಮಾಡಿದಾಗ ಅದು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಶಾಲೆಗಳಲ್ಲಿ ಕೂಡಾ ಮಕ್ಕಳಿಗೆ ಕನ್ನಡದ ಸುಂದರ ಸಾಹಿತ್ಯ ಇರುವ ಗೀತೆಗಳನ್ನು ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಕನ್ನಡಾಸಕ್ತಿ ಬೆಳೆಸಬೇಕು. ಕನ್ನಡದಲ್ಲಿ ಅಸಂಖ್ಯವಾದ ಮಕ್ಕಳನ್ನು ಕುಣಿಸುವಂಥಹ ಸಾಹಿತ್ಯ ಇದೆ. ಅದರ ಸದುಪಯೋಗ ಆಗಬೇಕು ಎಂದರು.

ಜಿಲ್ಲೆಯ ೧೧ ಮಂದಿ ಹಿರಿಯ ಸಾಧಕರಿಗೆ ಈ ಸಂದರ್ಭದಲ್ಲಿ ಶತಮಾನೋತ್ಸವದ ಗೌರವಾರ್ಪಣೆ ಸಲ್ಲಿಸಲಾಯಿತು. ಆಶಯ ನುಡಿಗಳನ್ನಾಡಿದ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿಯವರನ್ನು ಹುಟ್ಟೂರಿನ ಪರವಾಗಿ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ ಕೆ.ಎಸ್. ಪ್ರಕಾಶರಾವ್, ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷೆ ಲಲಿತಾ ಖಾರ್ವಿ, ಆರ್. ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿ ಅಧ್ಯಕ್ಷ ಎಸ್.ಜನಾರ್ದನ ಮರವಂತೆ ಉಪಸ್ಥಿತರಿದ್ದರು.

ಕಸಾಪ ತಾಲೂಕು ಅಧಕ್ಷ ಕುಂದಾಪುರ ನಾರಾಯಣ ಖಾರ್ವಿ ಸ್ವಾಗತಿಸಿದರು, ಸೂರಾರು ನಾರಾಯಣ ಮಡಿ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು.

Exit mobile version