ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗಂಗಾನಾಡು-ನೀರೋಡಿಯಲ್ಲಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ 9ನೇ ಗೃಹ ’ಶ್ರೀ ವರಲಕ್ಷ್ಮೀ ನಿಲಯ’ ಸೋಮವಾರ ಉದ್ಘಾಟನೆಗೊಂಡಿತು.
ನಿಪ್ಪಾಣಿ ಸಧರ್ಮ ಓಂಶಕ್ತಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ನೂತನ ಗೃಹವನ್ನು ಉದ್ಘಾಟಿಸಿ ಆಶೀರ್ವದಿಸಿ, ಜೀವನದಲ್ಲಿ ಪಂಚಯಜ್ಞಗಳನ್ನು ಮಾಡುವುದು ಅಗತ್ಯವಾಗಿದೆ. ನಮ್ಮನ್ನು ಸೃಷ್ಠಿಸಿದ ದೇವರಿಗೆ ಸಲ್ಲಿಸುವ ದೇವಯಜ್ಞ, ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸಿದ ಹೆತ್ತವರಿಗೆ ಸಲ್ಲಿಸುವ ಪಿತೃಯಜ್ಞ, ನಮಗೆ ಸಂಸ್ಕಾರ, ಸಂಸ್ಕೃತಿ ತಿಳಿಸಿಕೊಡುವ ಮೂಲಕ ಬದುಕಿಗೆ ಉತ್ತಮ ಮಾರ್ಗ ತೋರಿದ ಗುರು, ಹಿರಿಯರಿಗಾಗಿ ಸಲ್ಲಿಸುವ ಋಷಿಯಜ್ಞ, ಯಾವುದೇ ಫಲಾಪೇಕ್ಷೆ ಇಲ್ಲದೇ ಉಪಕಾರ ಮಾಡುತ್ತಿರುವ ಪಕೃತಿ ಪೂಜೆಯ ಭೂತಯಜ್ಞ, ಸಮಾಜದಲ್ಲಿ ಬದುಕುತ್ತಿರುವ ನಾವು ಸಮಾಜಕ್ಕೇನು ನೀಡಿದ್ದೇವೆ ಎನ್ನುವ ಕಲ್ಪನೆಯೇ ಸ್ವಯಜ್ಷ ಎಂದರು.
ತನ್ನ ಸಂಪಾದನೆಯ ಒಂದು ಭಾಗವನ್ನು ಈ ಭಾಗದ ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರೀಯವಾದ ಕಾರ್ಯವಾಗಿದೆ. ಸತ್ಪಾತ್ರರಿಗೆ ಮಾಡಿದ ದಾನ ಪರಿಪೂರ್ಣ ಎಂದೆನಿಕೊಳ್ಳುತ್ತದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಗೋವಿಂದ ಬಾಬು ಪೂಜಾರಿ ಇವರು ತಮ್ಮ ಸತ್ಕಾರ್ಯಗಳ ಮೂಲಕ ಶ್ರೇಷ್ಠ ಮಾನವರಲ್ಲಿ ಒಬ್ಬರಾಗಿದ್ದಾರೆ ಎಂದರು.
ನೂತನ ಗೃಹದ ಕೀಲಿಕೈಯನ್ನು ಫಲಾನುಭವಿ ಸೌಂತ್‌ಮನೆ ರಾಮ ಮರಾಠಿ ದಂಪತಿಗೆ ಹಸ್ತಾಂತರಿಸಿ ಮಾತನಾಡಿದ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ, ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ ಒಂಭತ್ತನೇ ಮನೆ ಇದಾಗಿದೆ. ಟ್ರಸ್ಟ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಚಿಂತನೆಯಿದೆ ಎಂದರು.
ಈ ವೇಳೆ ರಾಜನಾರಾಯಣವಿಠಲ ಗುರೂಜಿ, ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕ ಅಚ್ಚುತ ಕಲ್ಮಾಡಿ, ಛತ್ರಪತಿ ಶಿವಾಜಿ ಯುವಸೇನೆ ಅಧ್ಯಕ್ಷ ಮಹಾಲಿಂಗ ನಾಯ್ಕ್, ವಣಕೊಡ್ಲು ದೇವಳದ ಅನುವಂಶಿಕ ಧರ್ಮದರ್ಶಿ ಡಾ. ರಾಜಮೋಹನ್ ಶೆಟ್ಟಿ, ನೀರೋಡಿ ಗುರಿಕಾರ ನಾರಾಯಣ ಮರಾಠಿ, ಬಾಬು ಪೂಜಾರಿ ಮತ್ತು ಮಂಜಮ್ಮ ದಂಪತಿಗಳು, ಮಾಲತಿ ಗೋವಿಂದ ಪೂಜಾರಿ ಇದ್ದರು. ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಡಾ. ಗೋವಿಂದ ಬಾಬು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು.