Kundapra.com ಕುಂದಾಪ್ರ ಡಾಟ್ ಕಾಂ

ನಂದಿನಿ ಉತ್ಪನ್ನಗಳ ನೂತನ ಮಳಿಗೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ನಂದಿನಿ ಉತ್ಪನ್ನಗಳಿಗೆ ದೇಶಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳು ಗ್ರಾಹಕ ಸ್ನೇಹಿಯಾಗಿ ಸಶಕ್ತ ಮಾರುಕಟ್ಟೆ ಮೂಲಕ ಕೋಟ್ಯಾಂತರ ಜನರನ್ನು ತಲುಪುತ್ತಿದೆ. ಹೈನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ತಂತ್ರಜ್ಞಾನ ಹಾಗೂ ವಿಜ್ಞಾನದ ಮೂಲಕ ಹೈನುಗಾರರಿಗೆ ಹೈನುಗಾರಿಕೆಯಲ್ಲಿ ಇನ್ನಷ್ಟು ಉತ್ತೇಜನ ನೀಡಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.

ಗಂಗೊಳ್ಳಿಯ ಗ್ರಾಮ ಪಂಚಾಯತ್ ಕಾರ್ಯಾಲಯದ ಸಮೀಪ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಉತ್ಪನ್ನಗಳ ನೂತನ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಂದ ರೈತರಿಗಾಗಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೈನುಗಾರಿಕೆ ಮೂಲಕ ಲಕ್ಷಾಂತರ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತಿದೆ. ಪ್ರತಿನಿತ್ಯ ೫ ಲಕ್ಷಕ್ಕೂ ಮಿಕ್ಕಿ ಹಾಲು ಉತ್ಪಾದಕರು ಹಾಲನ್ನು ಡೈರಿಗಳಿಗೆ ನೀಡುತ್ತಿದ್ದು, ೧.೩೦ ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ವಿವಿಧೆಡೆಗಳಲ್ಲಿ ಫ್ರಾಂಚೈಸಿಗಳನ್ನು ತೆರೆದು ನಂದಿನಿ ಉತ್ಪನ್ನಗಳು ಸಿಗುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಬಿ.ರಾಘವೇಂದ್ರ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಜಾಗದ ಮಾಲೀಕ ರತ್ನಾಕರ ಬೈಂದೂರು, ಸುಚಿತ್ರಾ ಸಂತೋಷ ಕೊಠಾರಿ, ಸುರೇಂದ್ರ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.

ಉಪ ವ್ಯವಸ್ಥಾಪಕ ಸುಧಾಕರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version