Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಿಂದ ಕಾಂತಾರ ಚಿತ್ರತಂಡದ ಸಕ್ಸಸ್ ಜರ್ನಿ – ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಾಂತಾರ ಚಿತ್ರದ ಸಂಪೂರ್ಣ ಚಿತ್ರೀಕರಣವಾಗಿದ್ದು ಕುಂದಾಪುರದಲ್ಲಿ, ಸಿನಿಮಾ ಬಿಡುಗಡೆಯಾದ ಮೇಲೆ ಇದೀಗ ಅದರ ಯಶಸ್ಸಿನ ಪ್ರಯಾಣ ಆರಂಭವಾಗುತ್ತಿರುವುದೂ ಕೂಡ ಕುಂದಾಪುರದಲ್ಲಿಯೇ ಎಂಬ ಕಾರಣಕ್ಕೆ ಖುಷಿಯಾಗುತ್ತಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಕೋಟೇಶ್ವರದ ಭಾರತ್ ಸಿನಿಮಾಸ್ ಎದುರು ಆಯೋಜಿಸಲಾದ ಸಕ್ಸಸ್ ಜರ್ನಿಯಲ್ಲಿ ಕಾಂತಾರ ಚಿತ್ರತಂಡದೊಂದಿಗೆ ಭಾಗವಹಿಸಿ ಮಾತನಾಡಿ ನಮ್ಮ ಮಣ್ಣು, ಕೃಷಿ ಭೂಮಿಗೆ ಸಂಬಂಧಿಸಿದ ದೈವ ದೇವರ ಆಚರಣೆ, ಸಂಸ್ಕೃತಿ, ಸಂಪ್ರದಾಯವನ್ನು ದಂತಕಥೆಯಾಗಿರುವ ಪ್ರಯತ್ನ ಮಾಡಲಾಗಿದೆ. ನಮ್ಮ ಮಣ್ಣಿನ ಕಥೆ ಕನ್ನಡದಲ್ಲಿಯೇ ಎಲ್ಲರಿಗೂ ತಲುಪಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ಮೊದಲ ಹಂತದಲ್ಲಿ ಕನ್ನಡದಲ್ಲಿಯೇ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಮುಂದಿನ ವಾರ ಬೇರೆ ಬೇರೆ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಪಂಚದಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಕ್ಕಳಿಗೆ ಹೆಚ್ಚೆಚ್ಚು ಈ ಸಿನಿಮಾ ತೋರಿಸಿ ಅವರಿಗೂ ನಮ್ಮ ಸಂಸ್ಕೃತಿಯ ಪರಿಚಯವಾಗಲಿ ಎಂದು ಮನವಿ ಮಾಡಿಕೊಂಡರು.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂತಾರ ಸಿನಿಮಾ ನೋಡಿ ಬಳಿಕ, ಸನ್ಮಾನಿಸಿ ಮಾತನಾಡಿ ಮಲೆನಾಡ ತಪ್ಪಿಲಿನ ಪ್ರದೇಶ ಜನರ ಕಥೆಯನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. ಕರಾವಳಿಯ ದೈವಗಳ ಬಗ್ಗೆ ಇರುವ ಕಥೆ ಎಲ್ಲರಿಗೂ ಖಂಡಿತವಾಗಿಯೂ ಇಷ್ಟವಾಗುತ್ತದೆ. ನಾನು 34 ವರ್ಷಗಳ ಬಳಿಕ ಕಾಂತಾರ ಸಿನಿಮಾ ನೋಡಿದ್ದೇನೆ. ಸಿನಿಮಾ ನೋಡಿ ಖುಷಿಯಾಗಿದೆ ಎಂದರು.

ಕಾಂತಾರ ಚಿತ್ರತಂಡದ ನಾಯಕ ನಟ ರಿಷಬ್ ಶೆಟ್ಟಿ, ನಾಯಕ ನಟಿ ಸಪ್ತಮಿ ಗೌಡ, ನಟರಾದ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಂಬಿನಾಡು, ರಘು ಪಾಂಡೇಶ್ವರ್, ಸೈನಲ್ ಗುರು, ಯೋಗೀಶ್ ಬಂಕೇಶ್ವರ, ರಕ್ಷಿತ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸುಹಾಸ್ ಶೆಟ್ಟಿ, ದಿವ್ಯಾಧರ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ ಸೇರಿದಂತೆ ಹಲವರು ಈ ವೇಳೆ ಜೊತೆಗಿದ್ದರು.

ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ:
ಕಾಂತಾರ ಚಿತ್ರತಂಡದೊಂದಿಗೆ ಕುಂದಾಪುರ ಭಾರತ್ ಸಿನಿಮಾಸ್‌ಗೆ ಆಗಮಿಸಿದ ರಿಷಬ್ ಶೆಟ್ಟಿ ಭಾವುಕರಾಗಿ ತಮ್ಮ ಸಂತಸ ಹಂಚಿಕೊಂಡರು. ಎರಡು ಗಂಟೆಗಳ ಕಾಲ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಥಿಯೇಟರ್ ಎದುರೇ ಕಾಂತಾರ ಸಿನಿಮಾದಲ್ಲಿ ಬಳಸಲಾಗಿದ್ದ ಆರ್‌ಎಕ್ಸ್ ಬೈಕ್ ಓಡಿಸಿ ಖುಷಿ ಪಟ್ಟರು. ನೂರಾರು ಮಂದಿ ಸೆಲ್ಫಿಗಾಗಿ ಮುಗಿಬಿಳುತ್ತಿದ್ದುದು ಸಾಮಾನ್ಯವಾಗಿತ್ತು.

ಈ ವೇಳೆ ನಾಯಕ ನಟ ರಿಷಬ್ ಶೆಟ್ಟಿ, ನಾಯಕ ನಟಿ ಸಪ್ತಮಿ ಗೌಡ, ನಟರಾದ ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ ಸೇರಿದಂತೆ ಕಾಂತಾರ ಚಿತ್ರತಂಡದ ಇನ್ನಿತರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಘಟಿಸಿದ್ದ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ದಿವ್ಯಾಧರ ಶೆಟ್ಟಿ, ಉಮೇಶ್ ಶೆಟ್ಟಿ ಶಂಕರನಾರಾಯಣ, ಕಂಬಳ ಕೋಣದ ಮಾಲಿಕ ಪರಮೇಶ್ವರ ಭಟ್, ಓಟಗಾರ ಮಹೇಶ್ ಪೂಜಾರಿ, ಆರ್‌ಎಕ್ಸ್ 100 ಬೈಕ್ ಮಾಲಿಕ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.

ಭಾರತ್ ಸಿನಿಮಾಸ್‌ನಲ್ಲಿ ಎಲ್ಲಾ ಸ್ಕ್ರೀನ್ ಹೌಸ್‌ಪುಲ್:
ಕುಂದಾಪುರದ ಭಾರತ್ ಸಿನಿಮಾಸ್‌ನಲ್ಲಿ ಎಲ್ಲಾ ಸ್ಕ್ರೀನ್‌ಗಳು ಕಳೆದ ಎರಡು ದಿನಗಳಿಂದ ಹೌಸ್‌ಪುಲ್ ಆಗಿದೆ. ಬೆಳಿಗ್ಗೆಯಿಂದ ರಾತ್ರಿಯ ತನಕವೂ ೨೪ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಹೌಸ್‌ಪುಲ್ ಪ್ರದರ್ಶನ ಮುಂದುವರಿಯುವ ಸಾಧ್ಯತೆ ಇದೆ ಎಂದು ಸಿನಿಮಾಸ್ ಸಿಬ್ಬಂದಿಗಳು ಹೇಳಿದ್ದಾರೆ.

ಇದನ್ನೂ ಓದಿ:
► ದೈವದಬ್ಬರ, ಮನುಷ್ಯ – ಮರ – ಸರಕಾರದ ಸುತ್ತ ಹೆಣೆದ ಕತೆ ‘ಕಾಂತಾರ’| ಪಿಚ್ಚರ್ ಲಾಯ್ಕ್ ಇತ್ತ್ ಕಾಣಿ – https://kundapraa.com/?p=62418 .

Exit mobile version