Kundapra.com ಕುಂದಾಪ್ರ ಡಾಟ್ ಕಾಂ

ಹುಟ್ಟೂರಿನ ಹಿರಿಯರಿಗಾಗಿ ಥಿಯೇಟರ್ ಬುಕ್ ಮಾಡಿ ‘ಕಾಂತಾರ’ ಸಿನಿಮಾ ತೋರಿಸಿದ ಉದ್ಯಮಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ನೆಲದಲ್ಲಿ ಚಿತ್ರೀಕರಣಗೊಂಡ ಸಿನಿಮಾ ‘ಕಾಂತಾರ’ ಎಲ್ಲೆಡೆಯೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯೇ ವ್ಯಕ್ತವಾಗುತ್ತಿದೆ. ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕುಂದಾಪುರದ ಭಾರತ್ ಸಿನಿಮಾಸ್’ನಲ್ಲಿ ಒಂದು ಶೋ ಸಂಪೂರ್ಣ ಬುಕ್ ಮಾಡಿ ತನ್ನ ಹುಟ್ಟೂರಿನ ಹಿರಿಯ ನಾಗರಿಕರಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದಾರೆ.

ಕುಂದಾಪುರದ ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾವನ್ನು ತನ್ನೂರಿನ ಹಿರಿಯ ನಾಗರಿಕರೂ ನೋಡಲಿ ಎಂಬ ಮಹದಾಸೆಯಿಂದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕೋಟೇಶ್ವರದ ಭಾರತ್ ಸಿನಿಮಾಸ್’ನಲ್ಲಿ ಒಂದು ಸ್ಕ್ರೀನ್ ವೆಚ್ಚವನ್ನು ಸಂಪೂರ್ಣವಾಗಿ ತಾವೇ ಭರಿಸಿ ಮಂಗಳವಾರ ಬೆಳಿಗ್ಗೆ 11:30ಕ್ಕೆ ಉಚಿತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ದುಬೈನಲ್ಲಿ ಸಿನಿಮಾ ನೋಡಿದ್ದ ಅವರು ಕುಂದಾಪುರದಲ್ಲಿಯೂ ತನ್ನೂರಿನ ಜನತೆಗೆ ಸಿನಿಮಾ ತೋರಿಸುವ ಉದ್ದೇಶಕ್ಕಾಗಿ ಊರಿಗೆ ಬಂದು ಹಿರಿಯರೊಂದಿಗೆ ಬೆರೆತು ಸಂತೋಷಪಟ್ಟರು. ಸಿನಿಮಾಸ್’ನ 2ನೇ ಸ್ಕೀನ್ ಹೌಸ್ಪುಲ್ ಆಗಿತ್ತು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು, ನಮ್ಮ ದೈವ, ದೇವರು, ಆಚರಣೆ, ಸಂಪ್ರದಾಯವನ್ನು ಅದ್ಭುತವಾಗಿ ತೋರಿಸಿರುವ ಚಿತ್ರವನ್ನು ಎಲ್ಲರೂ ನೋಡಬೇಕಾದ್ದೇ. ದೇಶವಿದೇಶಗಳಲ್ಲಿ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕನ್ನಡ ಸಿನೆಮಾ ಎಲ್ಲೆಡೆಯೂ ಕನ್ನಡದಲ್ಲಿಯೇ ಬಿಡುಗಡೆಯಾಗಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ದುಬೈನಲ್ಲಿಯೂ ಸ್ನೇಹಿತರೆಲ್ಲಾ ಸೇರಿ ಒಂದು ಥಿಯೇಟರ್ ಬುಕ್ ಮಾಡಿದ್ದೆವು. ಹಾಗಾಗಿ ನನ್ನೂರಿನ ಹಿರಿಯರೂ ಸಿನಿಮಾವನ್ನು ನೋಡಲಿ ಎಂಬ ಕಾರಣಕ್ಕೆ ಸಿನಿಮಾ ಪ್ರದರ್ಶನ ಆಯೋಜಿಸಿದ್ದೇನೆ. ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಕ್ಕೆ ಬಂದಿರುವುದು ಖುಷಿ ತಂದಿದೆ. ಸಾಕಷ್ಟು ವರ್ಷಗಳಿಂದ ಸಿನಿಮಾ ಟಾಕೀಸ್ ನೋಡದವರು ಕೂಡ ಮತ್ತೆ ಬರುತ್ತಿದ್ದು 85 ವರ್ಷ ಪ್ರಾಯದ ನನ್ನ ತಂದೆ 35 ವರ್ಷದ ಬಳಿಕ ಸಿನೆಮಾ ಮಂದಿರಕ್ಕೆ ಬಂದು ಕಾಂತಾರ ವೀಕ್ಷಿಸಿದ್ದಾರೆ. ಈ ಪ್ರದರ್ಶನವನ್ನು ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ಪ್ರದರ್ಶನ ಆಯೋಜಿಸಲಾಗುವುದು ಎಂದರು.

ರಿಷಬ್ ನನ್ನ ಆತ್ಮೀಯ:
ರಿಷಭ್ ನನ್ನ ಆತ್ಮೀಯ ಗೆಳೆಯ. ದೊಡ್ಡ ನಟನಾದರೂ ಒಂದಿಷ್ಟು ಅಹಂ ಇಲ್ಲದ ಮನುಷ್ಯ ಆತ. ಅವರ ತಂದೆ ಹಾಗೂ ಕುಟುಂಬದವರೂ ಕೂಡ ಪರಿಚಯಸ್ಥರು. ಸಿನಿಮಾದಲ್ಲಿ ಅವರ ನಟನೆಯನ್ನು ನೋಡಿ ನಾನು ಬೆರಗಾಗಿದ್ದೇನೆ. ರಿಷಬ್ ನಮ್ಮೂರಿನ ಕಲೆಯನ್ನು ದೊಡ್ಡಮಟ್ಟದಲ್ಲಿ ಎಲ್ಲೆಡೆಯೂ ತಲುಪಿಸಿದ್ದಾರೆ. ಕಾಂತಾರ ಸಿನೆಮಾ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಬಾರದವರೂ ಕೂಡ ಈ ಸಿನೆಮಾ ಮೆಚ್ಚಿಕೊಂಡಿದ್ದಾರೆ. ಸದ್ಯದಲ್ಲೇ ಇತರೆ ನಾಲ್ಕು ಭಾಷೆಗಳಲ್ಲಿ ಸಿನೆಮಾ ಬರಲಿದ್ದು ಐತಿಹಾಸಿಕ ದಾಖಲೆ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದರು. – ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಛೇರ್ಮನ್, ಫಾರ್ಚೂನ್ ಗ್ರೂಪ್ಸ್

Exit mobile version