Site icon Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ ಡಾನ್ ಬಾಸ್ಕೊ ಸ್ಕೂಲ್: ಮಾನಸಿಕ ಆರೋಗ್ಯ ಅರಿವು ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಯ ಜತೆಗೆ ಶೈಕ್ಷಣಿಕ ಪ್ರಗತಿ ಸಾಧಿಸಲು ಸ್ಥಿರವಾದ ಮಾನಸಿಕ ಆರೋಗ್ಯ ಇರಬೇಕಾದುದು ಅಗತ್ಯ. ನಮ್ಮ ದೇಹವು ಮನಸ್ಸಿನಿಂದ ನಿಯಂತ್ರಿಸಲ್ಪಡುತ್ತದೆ. ಆದುದರಿಂದ ಮನಸ್ಸು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಆರೋಗ್ಯಯುತ ದೇಹ, ಆರೋಗ್ಯಯುತ ಚಟುವಟಿಕೆ ಇರಲು ಸಾಧ್ಯ. ಇವೆರಡಕ್ಕೂ ಸಮಾನ ಮಹತ್ವ ನೀಡಬೇಕಾಗುತ್ತದೆ ಎಂದು ತ್ರಾಸಿಯ ಡಾನ್ ಬಾಸ್ಕೊ ಶಾಲೆಯ ರೆಕ್ಟರ್ ಫಾ. ಮ್ಯಾಕ್ಸಿಮ್ ಡಿಸೋಜ ಹೇಳಿದರು.

ಈಚೆಗೆ ಶಾಲೆಯಲ್ಲಿ ನಡೆದ ಮಾನಸಿಕ ಆರೋಗ್ಯ ಅರಿವು ದಿನಾಚರಣೆಯನ್ನು ಸಂಬಂಧಿತ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಆಚರಣೆ ನಿಮಿತ್ತ ಒಂದು ವಾರ ನಡೆಯುವ ಚಟುವಟಿಕೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ, ಅದರ ಅರಿವು ಗಳಿಸಬೇಕು ಎಂದರು.

ಶಾಲೆಯ ’ಜೀವನ ವಿಭಾಗ’ದ ಆಶ್ರಯದಲ್ಲಿ ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥರ ಮಾರ್ಗದರ್ಶನ ಮತ್ತು ಸೀನಿಯರ್ ಸೆಕೆಂಡರಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಜಾಗತಿಕ ಮಾನಸಿಕ ಆರೋಗ್ಯ ದಿನದಂದು ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಮಹತ್ವ ಹಾಗೂ ಸ್ವಾಸ್ಥ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಅಗತ್ಯವನ್ನು ವಿವಿಧ ಚಟುವಟಿಕೆಗಳ ಮೂಲಕ ನಿರೂಪಿಸಿದರು. ಉಪ ಪ್ರಾಂಶುಪಾಲ ರೊನಾಲ್ಡ್ ವಾಸ್ ಮತ್ತು ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥೆ ರಕ್ಷಿತಾ ಎನ್. ಜೆ, ವಿದ್ಯಾರ್ಥಿ ಪ್ರತಿನಿಧಿಗಳು ಇದ್ದರು.

ವಾರದ ಒಂದೊಂದು ದಿನವನ್ನು ಮುಗುಳು ನಗೆಯ ದಿನ, ಹಾರೈಕೆಯ ದಿನ, ಕಾರುಣ್ಯ ಮತ್ತು ಕೃತಜ್ಞತೆಯ ದಿನ ಇತ್ಯಾದಿ ಪ್ರಧಾನ ವಿಷಯಗಳೊಂದಿಗೆ ಆಚರಿಸಲಾಗುವುದು. ಇವುಗಳ ಮೇಲೆ ವಿದ್ಯಾರ್ಥಿಗಳು ಉಕ್ತಿ ಮತ್ತು ಸಂದೇಶ ರಚನೆ, ಅವುಗಳ ಪ್ರಸ್ತುತಿ, ಏಕ ಪಾತ್ರಾಭಿನಯ, ಮೂಕಾಭಿನಯ, ನಟನೆ, ಮುಖವರ್ಣಿಕೆಗಳ ಮೂಲಕ ಭಾಗವಹಿಸಿ ತಮ್ಮ ವಿಚಾರಗಳನ್ನು ತಿಳಿಸುತ್ತಾರೆ. ಜಾಗತಿಕ ಮಾನಸಿಕ ಆರೋಗ್ಯ ಒಕ್ಕೂಟ ಮತ್ತು ಜಾಗತಿಕ ಆರೋಗ್ಯ ಸಂಸ್ಥೆ ಅಕ್ಟೋಬರ್ ತಿಂಗಳನ್ನು ಜಾಗತಿಕ ಮಾನಸಿಕ ಆರೋಗ್ಯ ಮಾಸವಾಗಿ ಆಚರಿಸುತ್ತವೆ ಎಂದು ಈ ಸಂದರ್ಭ ಪ್ರಕಟಿಸಲಾಯಿತು.

Exit mobile version