Kundapra.com ಕುಂದಾಪ್ರ ಡಾಟ್ ಕಾಂ

ಇಡೂರು-ಕುಜ್ಞಾಡಿ: ಹಾರ್ಡ್‌ವೇರ್ ಅಂಗಡಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಕೊಲ್ಲೂರು: ತಾಲೂಕಿನ ವಂಡ್ಸೆ ಸಮೀಪದ ಇಡೂರು ಕುಜ್ಞಾಡಿ ಎಂಬಲ್ಲಿ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಘಟನೆಯ ವಿವರ:
ಇಡೂರು ಕುಜ್ಞಾಡಿಯ ಶಾಲೆಯ ಎದುರಿಗಿರುವ ಪಟೇಲ್ ಕಾಂಪ್ಲೆಕ್ಸ್‌ನಲ್ಲಿ ಸರ್ವೋತ್ತಮ ಶೆಟ್ಟಿ ಮತ್ತು ಸಹೋದರರಿಗೆ ಸೇರಿದ ಹಾರ್ಡ್‌ವೇರ್ ಅಂಗಡಿಯನ್ನು ಎಂದಿನಂತೆ ಸಂಜೆ 5:30ರ ವೇಳೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆ ಬಳಿಕ ಅಂಗಡಿಗೆ ಒಳಗಿನಿಂದ ಬೆಂಕಿ ತಗಲಿತ್ತು. ಸುಮಾರು 6:30ರ ಹೊತ್ತಿಗೆ ಬೆಂಕಿಯ ಕೆನ್ನಾಲಿಗೆ ಹಾರ್ಡ್‌ವೇರ್ ಅಂಗಡಿಯನ್ನು ಬಹುಪಾಲು ಸುಟ್ಟು ಹೆಂಚಿನ ಮಾಡಿಗೂ ತಗಲಿ ಪಕ್ಕದ ಅಂಗಡಿಯನ್ನೂ ಆವರಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳಿಯರು ಹರಸಾಹಸ ಪಟ್ಟು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಅಷ್ಟರಲ್ಲಾಗಲೇ ಹಾರ್ಡ್‌ವೇರ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದರೇ, ಪಕ್ಕದ ದಿನಸಿ ಅಂಗಡಿಯ ಮಾಡು ಹಾಗೂ ಅದೇ ಕಾಂಪ್ಲೆಕ್ಸ್‌ನ ಹಿಂಬದಿ ಇದ್ದ ಮನೆಯ ಮೇಲ್ಚಾವಣಿ ಭಾಗಶಃ ಬೆಂಕಿ ತಗುಲು ಸುಟ್ಟುಹೋಗಿತ್ತು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿರಬಹುದೆಂದು ಎಂದು ಶಂಕಿಸಲಾಗಿದೆ. ಅವಘಡದಲ್ಲಿ ಹಾರ್ಡ್‌ವೇರ್ ಅಂಗಡಿಗೆ ಸುಮಾರು 30ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ನಾಶವಾಗಿರುವ ಬಗ್ಗೆ ಅಂದಾಜಿಸಲಾಗಿದೆ.  ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ಕೊಲ್ಲೂರು ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

Fire in hardward shop iduru kunjnadi -kolluru (1)

Exit mobile version