Kundapra.com ಕುಂದಾಪ್ರ ಡಾಟ್ ಕಾಂ

ಹೈನುಗಾರರಿಗೆ ಬೆಳಕಿನ ಹಬ್ಬ ಕಹಿ. ಪಶು ಆಹಾರದ ದರ ಶೇ.30ರಷ್ಟು ಏರಿಕೆ ಸರಿಯಲ್ಲ – ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.24:
ರಾಷ್ಟದಾದ್ಯಂತ ನಂದಿನಿ ಕೋಟ್ಯಾಂತರ ಜನರಿಗೆ ದೀಪಾವಳಿಯ ಸಿಹಿ ಹಂಚುತ್ತಿದೆ. ಆದರೆ ಹೈನುಗಾರರ ಪಾಲಿಗೆ ಬೆಳಕಿನಹಬ್ಬ ಕಹಿ ಅನುಭವ ನೀಡಿದೆ. ಕರ್ನಾಟಕ ಹಾಲು ಮಹಾಮಂಡಳವು ಪಶು ಆಹಾರದ ಬೆಲೆಯನ್ನು ಹೆಚ್ಚಿಸಿರುವುದರಿಂದ, ಹಾಲಿನ ದರ ಏರುವ ನಿರೀಕ್ಷೆಯಲ್ಲಿದ್ದ ರಾಜ್ಯದ ಹೈನುಗಾರರು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂದು ದಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ

ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತೀ ಹೆಚ್ಚು ಉಲು ಉತ್ಪಾದಿಸುವ ಹೈನುಗಾರರ ಪೈಕಿ ತಾನೂ ಒಬ್ಬನಾಗಿದ್ದು ಪ್ರತಿವರ್ಷ 70 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಕೆಎಂಎಫ್ ಪಶು ಆಹಾರದ ದರವನ್ನು ಶೇ.30ರಷ್ಟು ಏರಿಕೆ ಮಾಡಿರುವುದರಿಂದ, ಪ್ರತಿ 50ಕೆ.ಜಿ ನಂದಿನಿ ಗೋಲ್ಡ್ ಪಶು ಆಹಾರದ ಬೆಲೆ 1053ರೂ ನಿಂದ 1180ರೂ. ಮತ್ತು ಬೈಪಾಸ್ ಪಶು ಆಹಾರ 1175 ರೂ ನಿಂದ 1302ರೂ. ಗೆ ಹೆಚ್ಚಳವಾಗಿದೆ. ಇದರಿಂದ ಪಶುಸಂಗೋಪನೆ ಕಷ್ಟವಾಗಲಿದೆ ಎಂದು ದೂರಿದರು.

ಅವಿಭಜಿತ ದಕ ಜಿಲ್ಲೆಯಲ್ಲಿ ಸುಮಾರು 730 ಹಾಲು ಉತ್ಪಾದನಾ ಸಂಘಗಳಿದ್ದು, 65 ಸಾವಿರ ಹೈನುಗಾರರಿಂದ ಹಾಲು ಶೇಖರಿಸಲಾಗುತ್ತಿದೆ. ಅಲ್ಲದೇ ಈ ಈ ಸಂಘಗಳಲ್ಲಿ 3 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜಾನುವಾರುಗಳಲ್ಲಿ ಕಂಡು ಬಂದಿರುವ ಗಂಟುರೋಗ ಜೊತೆಗೆ ಹಾಲಿಗೆ ಸರಿಯಾದ ಧಾರಣೆ ಸಿಗದಿರುವುದರಿಂದ ರೈತರು ಕಂಗಾಲಾಗಿದ್ದು, ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

ಕಳೆದ ಹಲವು ವರ್ಷಗಳಿಂದ ಹಾಲಿನ ದರ ಪ್ರತಿ ಲೀ.29ರೂ. ನೀಡಲಾಗುತ್ತಿದ್ದು, ಹಾಲಿನ ಧಾರಣೆಯನ್ನು ರೂ.5 ಹೆಚ್ಚಳ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ, ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಸರ್ಕಾರ 3ರೂ. ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ಸೂಚಿಸಿ ಅತೀ ಶೀಘ್ರದಲ್ಲಿ ನೂತನ ದರ ಜಾರಿಗೊಳಿಸುವ ಭರವಸೆ ನೀಡಿ ಆರು ತಿಂಗಳಾಯಿತು. ಈಗೀನ ಧಾರಣೆಯಲ್ಲಿ ನಿರ್ವಹಣೆ ವೆಚ್ಚ ಸಾಧ್ಯವಿಲ್ಲ. ದರ ಹೆಚ್ಚಿಸಬೇಕೆಂಬ ಆಗ್ರಹದ ನಡುವೆ ದೀಪಾವಳಿ ಹಬ್ಬಕ್ಕೆ ಪಶು ಆಹಾರದ ಧಾರಣೆ ಹೆಚ್ಚಳ ಮಾಡುವ ಮೂಲಕ ಹೈನುಗಾರರಿಗೆ ದೊಡ್ಡ ಹೊಡೆತ ನೀಡಿದೆ. ಹೈನುಗಾರರಿಗೆ ಅನುಕೂಲವಾಗುವಂತೆ ಒಂದೇ ಪ್ರತಿ ಲೀ. ಹಾಲಿನ ದರವನ್ನು 10ರೂ. ಹೆಚ್ಚಿಸಿ, ಇಲ್ಲವೇ ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡಲಿ. ರಾಜ್ಯ ಸರ್ಕಾರ ಹೈನುಗಾರರ ಪಶು ಆಹಾರಕ್ಕೂ ಶೇ.50ರಷ್ಟು ಸಬ್ಸಿಡಿ ನೀಡುವಂತೆ ಒತ್ತಾಯಿಸಿದರು.

ಮಿಶ್ರತಳಿ ಜಾನುವಾರು ಗುಣಮಟ್ಟದ ಹಾಲು ನೀಡಬೇಕಾದರೆ ದಿನಕ್ಕೆ ಕನಿಷ್ಠ 10 ಕೆಜಿ ಪಶು ಆಹಾರ ಮತ್ತು ಒಂದು ಪಿಂಡಿ ಹುಲ್ಲು ಬೇಕು. ಒಂದು ಹಸುವಿಗೆ ದಿನಕ್ಕೆ ಆಹಾರ ಮತ್ತು ಇತರೇ ಉದ್ದೇಶಕ್ಕಾಗಿ ರೂ.500-600 ವೆಚ್ಚವಾಗುತ್ತದೆ. ಆಕಳು ದಿನಕ್ಕೆ 10ಲೀ. ಹಾಲು ಕೊಟ್ಟರೂ ಈಗಿನ ಧಾರಣೆಯಲ್ಲಿ ಹೈನುಗಾರರಿಗೆ ರೂ.300 ಕೂಡ ಸಿಗುವುದಿಲ್ಲ ಎಂದು ವಿವರಿಸಿದರು.

ಸರಕಾರವು ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಕೆಎಂಎಫ್ ತೀರ್ಮಾನಕ್ಕೆ ತನ್ನ ಪ್ರಭಾವದ ಮೂಲಕ ತಡೆಯೊಡ್ಡಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಿಜವಾಗಿಯೂ ರೈತರ ಬಗ್ಗೆ ಸರ್ಕಾರಕ್ಕೆ

ನೈಜ ಕಾಳಜಿ ಇದ್ದಿದ್ದರೆ ಆರು ತಿಂಗಳ ಹಿಂದೆಯೇ ಧಾರಣೆ ಹೆಚ್ಚಿಸುವ ಕೆಎಂಎಫ್ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಬೇಕಿತ್ತು. ಪ್ರಸ್ತುತ ಪಶು ಆಹಾರದ ಧಾರಣೆ ಕಡಿಮೆ ಮಾಡಿ ಹಾಲಿನ ದರವನ್ನು ಕೂಡಲೇ ಹೆಚ್ಚಿಸಬೇಕು ಎಂದು ಆಗ್ರಹಿಸಿದ ಅವರು, ತಮ್ಮ ಬೇಡಿಕೆಗಳು ತಕ್ಷಣ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ಇತರೇ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗಬಹುದು ಎಂದು ಎಚ್ಚರಿಸಿದರು.

Exit mobile version