Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ವರಲಕ್ಷ್ಮೀ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಅವರ ಸಾರಥ್ಯದಲ್ಲಿ ಆಯೋಜಿಸಲಾದ ವರಲಕ್ಷ್ಮೀ ಬೃಹತ್ ಉದ್ಯೋಗ ಮೇಳ ಭಾನುವಾರ ಉಪ್ಪುಂದದ ನಂದನವನ – ಪ್ರಗ್ನ್ಯಾ ಸಾಗರ್ ಹಾಲ್ನಲ್ಲಿ ಉದ್ಘಾಟನೆಗೊಂಡಿತು.

ಉಡುಪಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಅರುಣಪ್ರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣದ ಬಳಿಕ ಉದ್ಯೋಗವನ್ನು ಗಿಟ್ಟಿಸಿಗೊಳ್ಳಲು ಹಲವಾರು ಆಯ್ಕೆಗಳಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ಛಾತಿಯನ್ನು ವಿದ್ಯಾರ್ಥಿಗಳು ಹೊಂದಬೇಕಾಗಿದೆ ಎಂದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯ ಮಾಡಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ ಬ್ಯಾಗ್ ವಿತರಣೆ, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ವಿದ್ಯಾರ್ಥಿ ದತ್ತು ಸ್ವೀಕಾರ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಲಾಗಿದ್ದು, ಇದೀಗ ಉದ್ಯೋಗ ಮೇಳ ಆಯೋಜಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಕನಸು ನನಸು ಮಾಡಲಾಗುತ್ತಿದೆ ಎಂದರು.

ಸುಂದರ ಭಾರತ್ ಟ್ರಸ್ಟ್ ಅಧ್ಯಕ್ಷರಾದ ಪ್ರತಾಪ್ ಪರಾಶತ್, ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು 30ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಂಡಿದ್ದು, 3,000ಕ್ಕೂ ಅಧಿಕ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು.

https://youtu.be/lHl5wrRZD28
Exit mobile version