ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಂಗೊಳ್ಳಿ ಇವರ ಸಹಯೋಗದೊಂದಿಗೆ ಕುಂದಾಪುರ ವಲಯದ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯಾಗಾರ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕಾಂತರಾಜ್, ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸುವ ದೃಷ್ಟಿಯಿಂದ ಶಿಕ್ಷಕರಿಗೆ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಮಾಡಲಾಗುತ್ತಿದೆ. ಬೇರೆ ಬೇರೆ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಶಿಕ್ಷಕರು ಚರ್ಚೆ ನಡೆಸಬೇಕು. ತಮ್ಮ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಬೇಕಾಗುವ ತಂತ್ರಗಳನ್ನು, ಬೋಧನಾ ಕ್ರಮಗಳ ಬಗ್ಗೆ ಕಾರ್ಯಾಗಾರದಲ್ಲಿ ಮುಕ್ತವಾಗಿ ಚರ್ಚೆ ನಡೆಸಿ, ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸುವುದರ ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆಗೂ ಹೆಚ್ಚಿನ ಗಮನಹರಿಸಬೇಕಿದೆ. ಒಟ್ಟಿನಲ್ಲಿ ಕಳೆದ ಸಾಲಿಗಿಂತ ಉತ್ತಮ ಫಲಿತಾಂಶವನ್ನು ಈ ಬಾರಿ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಸದಸ್ಯ ಕೆ.ರಾಮನಾಥ ನಾಯಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಸಂತೋಷ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಸಮಾಜವಿಜ್ಞಾನ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉದಯಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ ಭಾಗವತ್, ಜಯಶೀಲ ಶೆಟ್ಟಿ, ಗಂಗೊಳ್ಳಿ ಸ.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉಮೇಶ ಕರ್ಣಿಕ್ ಸ್ವಾಗತಿಸಿದರು. ಕಛೇರಿ ಸಹಾಯಕ ಶ್ರೀಧರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ಎನ್.ಆದಿನಾಥ ಕಿಣಿ ವಂದಿಸಿದರು.