Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರು, ರೈತ ಕೂಲಿಕಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ ಬಸವರಾಜ ಬೊಮ್ಮಾಯಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮುಖ್ಯಮಂತ್ರಿಯಾಗಿ ನಾಲ್ಕು ಗಂಟೆಯ ಒಳಗೆ ರೈತರ ಮಕ್ಕಳಿಗಾಗಿ ಆರಂಭಿಸಿದ್ದ ವಿದ್ಯಾನಿಧಿ ಯೋಜನೆಯನ್ನು ಈ ವರ್ಷದಿಂದ ಮೀನುಗಾರರು ಹಾಗೂ ರೈತ ಕೂಲಿಕಾರರ ಮಕ್ಕಳಿಗೂ ವಿಸ್ತರಿಸಲಾಗುವುದು. ಇದರಿಂದ ಕರಾವಳಿ 2 ಲಕ್ಷ ಮೀನುಗಾರರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.

ಅವರು ಸೋಮವಾರ ಮುಳ್ಳಿಕಟ್ಟೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮನೆ ಮನೆಗೆ ಕುಡಿಯು ನೀರು, ಮರವಂತೆ ಮೀನುಗಾರಿಕಾ ಬಂದರು, ಏತ ನೀರಾವರಿ ಯೋಜನೆ ಸಹಿತ 1591.77 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ ದುಡಿಯುವ ವರ್ಗಕ್ಕೆ ಸ್ವಾವಲಂಭಿ ಬದುಕು ಕಟ್ಟಿಕೊಡುವುದು ನಮ್ಮ ಕನಸು. ಆ ನಿಟ್ಟಿನಲ್ಲಿ ಬಿಜೆಪಿ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಬಡವರಿಗೆ ಬಾಯಿ ಮಾತಿನಿಂದ ಮಾತ್ರ ಪರಿಹಾರವಲ್ಲದೇ, ಅವರ ಕಷ್ಟಸುಖದಲ್ಲಿ ಪಾಲ್ಗೊಂಡು ಅಭಿವೃದ್ಧಿ ಮಾಡಬೇಕು ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದೇ ದಾರಿಯಲ್ಲಿ ಪ್ರಸ್ತುತ ಬಿಜೆಪಿ ಸರಕಾರ ಮುಂದುವರಿಯುತ್ತಿದೆ.

ಮನೆ ಮನೆಗೆ ಬೆಳಕು ಯೋಜನೆಯಡಿ ಎಲ್ಲಾ ಮನೆಗೆ ಬೆಳಕು, ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಇನ್ವೆಸ್ಟರ್ ಮೀಟ್, 100 ಅಂಬೇಡ್ಕರ್ ಹೆಸರಿನಲ್ಲಿ ಹಾಸ್ಟೆಲ್, ಕನಕದಾಸರ ಹೆಸರಿನಲ್ಲಿ ಆಸ್ಪತ್ರೆ, ಮಂಗಳೂರಿನಲ್ಲಿ 1000 ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ, ನಾರಾಯಣಗುರುಗಳ ಹೆಸರಿನಲ್ಲಿ ೪ ವಸತಿಶಾಲೆಗೆ ಮಂಜೂರಾತಿ ನೀಡಲಾಗಿದೆ. ಎಸ್‌ಸಿ ಎಸ್‌ಟಿ ಬಡವರಿಗಾಗಿ ೭೫ ಯುನಿಟ್ ತನಕ ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. 9 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ 6 ಲಕ್ಷ ಹೆಕ್ಟೆರ್ ಮೂಲ ಕಂದಾಯ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಅಡಿಕೆ ರೋಗದ ಮೂಲ ತಿಳಿದು ಸೂಕ್ತ ಔಷಧ ದೊರೆಯುವ ತನಕ ತಕ್ಷಣಕ್ಕೆ ಔಷಧಿ ಸಿಂಪಡಿಸಲುವ ಸಲುವಾಗಿ 10 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ ಸರಕಾರ ಸಂಸದರು ಶಾಸಕರ ನಡುವೆ ಸಮನ್ವಯತೆ ಇದ್ದರೆ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಮಾಡುಬಹುದು ಎಂಬುವುದಕ್ಕೆ ಬೈಂದೂರು ಕ್ಷೇತ್ರವೇ ಸಾಕ್ಷಿ. ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಸಂಸದನಾಗಿದ್ದ ಸಂದರ್ಭ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇನೆ. ಸಂಸದರು ಹಾಗೂ ಶಾಸಕರು ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿರುವುದಕ್ಕೆ ಇಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ ಎಂದರು.

ಮೀನುಗಾರರ ಮಕ್ಕಳಿಗೆ ಸಾಂಕೇತಿಕವಾಗಿ ವಿದ್ಯಾನಿಧಿಯನ್ನು ವಿತರಿಸಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ವೇದಿಕೆ ಏರುವ ಮುನ್ನ ಮುಖ್ಯಮಂತ್ರಿಗಳು ಗೋಪೂಜೆ ನೆರವೇರಿಸಿದರು.

ಸಂಸದರಾದ ಬಿ.ವೈ. ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ ಸಂಸದನಾದ ಬಳಿಕ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಮುತುವರ್ಜಿ ವಹಿಸಿ ಶಾಸಕರ ಸಹಕಾರದೊಂದಿಗೆ ಕೆಲಸ ಮಾಡಲಾಗಿದೆ. ಅದರ ಪರಿಣಾಮದಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ನೀರಾವರಿ ಯೋಜನೆ, ಮನೆ ಮನೆಗೆ ಕುಡಿಯುವ ನೀರು, ಕೇಬಲ್ ಕಾರು ಯೋಜನೆ, ಸಮುದಾಯ ಭವನ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಸೇರಿದೆ. ಶಂಕುಸ್ಥಾಪನೆಗೊಳ್ಳಲಿರುವ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಗೊಂಡ ಕಾಮಗಾರಿಗಳು ಬಿಜೆಪಿ ಸರಕಾರದ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತಿರುವುದು ಸರಕಾರದ ಕಾರ್ಯತತ್ಪರತೆಯನ್ನು ಸೂಚಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿದೆ. ಚುನಾವಣೆ ಸಂದರ್ಭ ನೀಡಿದ ಬಹುಪಾಲು ಭರವಸೆಗಳು ಈಡೇರಿದೆ. ಇದರ ಜೊತೆಗೆ ಕೆಲವು ಕಾಮಗಾರಿಗಳು ಆಗುವುದು ಬಾಕಿ ಇದೆ. ಬೈಂದೂರು ಕ್ಷೇತ್ರ ಪ್ರವಾಸೋದ್ಯಮಕ್ಕೆ ಅನುಕೂಲಕರ ಪ್ರದೇಶ. ಅದಕ್ಕೆ ಅಗತ್ಯವಾದ ಅನುಕೂಲ ಮಾಡಿಕೊಡುವ ಜೊತೆಗೆ ಬೈಂದೂರು ಕ್ಷೇತ್ರ ದೇವಸ್ಥಾನದ ಅಭಿವೃದ್ಧಿ, ಮೆಡಿಕಲ್ ಕಾಲೇಜು ಹಾಗೂ ಬೈಂದೂರು ಎರ್‌ಪೋರ್ಟ್‌ಗೆ ಆಗಬೇಕಿದ್ದು ಮುಖ್ಯಮಂತ್ರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಜಲಸಂಪನ್ಮೂಲ ಇಲಾಖಾ ಸಚಿವರಾದ ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಸಚಿವ ವಿ. ಸುನಿಲ್ ಕುಮಾರ್, ರಾಜ್ಯ ಹಿಂದೂಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕ್ಯಾಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ ಕುಮಾರ್ ಕೊಡ್ಗಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಆರ್. ಹೆಗ್ಡೆ, ಉಡುಪಿ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಎಸಿ ಕೆ. ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ವಂದಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ:
► ಜನಸಂಕಲ್ಪ ಯಾತ್ರೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು: ಸಿಎಂ ಬಸವರಾಜ ಬೊಮ್ಮಾಯಿ – https://kundapraa.com/?p=63056 .
► ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಆಡಳಿತ ಯಂತ್ರದ ದುರ್ಬಳಕೆ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪ – https://kundapraa.com/?p=63062 .

Exit mobile version