Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಸುಣ್ಣಾರಿಯ ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷಾ ಸಿದ್ಧತೆಯ ಉಪನ್ಯಾಸ ಕಾರ್ಯಾಗಾರವು ಇತ್ತೀಚಿಗೆ ನಡೆಯಿತು.

ಕಾರ್ಯಗಾರದಲ್ಲಿ ಉಪನ್ಯಾಸಕರಾಗಿದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಸತೀಶ ಆರ್ ಮೈಸೂರು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಇಂದಿನ ಯುವಕರೇ ನಾಳಿನ ನೇತಾರರು, ನೀವು ಈ ದೇಶವನ್ನು ಮುನ್ನೆಡೆಸಿ ರಕ್ಷಿಸುವವರು ಎಂದು ಹೇಳುತ್ತಾ, ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಪೂರ್ವ ಜ್ಞಾನವನ್ನು ಪಡೆಯಬಲ್ಲ ಅಪಾರ ಶಕ್ತಿ ಅಡಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಶಿಸ್ತುಬದ್ಧ ಯೋಗಾಸನಗಳು ನರಮಂಡಲವನ್ನು ಬಲಗೊಳಿಸುವುದಲ್ಲದೆ ಚುರುಕಾಗಿಸುವುದರಿಂದ ಏಕಾಗ್ರತೆಗೆ ಬಹಳ ಸಹಕಾರಿಯಾಗುತ್ತದೆ. ಹಾಗೂ ನಮ್ಮ ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕೆಂದರು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಎಕ್ಸ್ಲೆಂಟ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದೊಂದಿಗೆ ಅವರು ಮಾನಸಿಕವಾಗಿ ಕಲಿಕೆಯಲ್ಲಿ ಸಧೃಢರಾಗಬೇಕು, ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯಲ್ಲಿ ಆಗಾಗ ನಡೆಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸುರೇಖಾ ಆಚಾರ್ಯ ಉಪಸ್ಥಿತರಿದ್ದರು. ಆಂಗ್ಲ ಭಾಷೆಯ ಉಪನ್ಯಾಸಕರಾದ ಪ್ರಕಾಶ್ ಆಚಾರ್ಯರವರು ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

Exit mobile version