Kundapra.com ಕುಂದಾಪ್ರ ಡಾಟ್ ಕಾಂ

ಗಂಭೀರ ವಿಷಯವನ್ನೂ ತಿಳಿಯಾಗಿ ಹೇಳುವ ಶಕ್ತಿ ಕಾರ್ಟೂನಿಗಿದೆ: ಹೊಂಬಾಳೆ ಫಿಲ್ಮ್ಸ್ ಕಾರ್ತಿಕ್ ಗೌಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂದಿಗ್ದತೆ, ಅತ್ಯಂತ ನೋವಿನ ಸಂಗತಿಗಳನ್ನೂ ಗೆರೆಗಳ ಮೂಲಕ ತೆರೆದಿಟ್ಟು, ನಗುವರಳಿಸುವ ಜೊತೆಗೆ ಸಮಾಜವನ್ನು ತಿದ್ದುವ ತಾಕತ್ತು ಕಾರ್ಟೂನಿಗಿದೆ. ಎಲ್ಲಾ ಕಾರ್ಟೂನಿಸ್ಟ್‌ಗಳು ಸಮಾಜಕ್ಕೊಂದು ಸಂದೇಶ ನೀಡುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದರು.

Live - ಕಾರ್ಟೂನ್ ಹಬ್ಬ ಉದ್ಘಾಟನಾ ಸಮಾರಂಭ!
Watch Video

ಅವರು ವಿಭಿನ್ನ ಹಾಗೂ ಕಾರ್ಟೂನು ಕುಂದಾಪ್ರ ಬಳಗದ ವತಿಯಿಂದ ಕುಂದಾಪುರದ ಕಲಾಮಂದಿರದಲ್ಲಿ 5 ದಿನಗಳ ಕಾಲ ಆಯೋಜಿಸಲಾದ 10ನೇ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ ಸಂತಷವಿರಲಿ ವಿಷಾದವಿರಲಿ ಮೊಗದಲ್ಲಿ ನಗುವರಳಿಸಿ, ಹೇಳುವ ತಾಕತ್ತು ಕಾರ್ಟೂನ್ ಗೆರೆಗಳಿಗಲ್ಲದೆ ಮತ್ತಾವ ಮಾಧ್ಯಮದಲ್ಲಿ ಕಾಣಲಾಗದು. ಸತೀಶ್ ಆಚಾರ್ಯ ಅವರ ಕಾರ್ಟೂನನ್ನು ಸಾಕಷ್ಟು ವರ್ಷದಿಂದ ಫಾಲೋ ಮಾಡುತ್ತಿದ್ದು, ಕಾರ್ಟೂನು ಹಬ್ಬದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದರು.

ಹಿರಿಯ ವ್ಯಂಗ್ಯಚಿತ್ರಗಾರ ಜೇಮ್ಸ್ ವಾಜ್, ಸತೀಶ್ ಆಚಾರ್ಯ ಪುಸ್ತಕ ಗೋ ಕೊರೋನಾ ಗೋ-2 ಬಿಡುಗಡೆ ಮಾಡಿ, ಕಾರ್ಟೂನ್ ಕಲಿಕೆಗೆ ಉತ್ತಮ ಮಾರ್ಗದರ್ಶಿ ಪುಸ್ತಕವಾಗಿದ್ದು, ಗೆರೆಗಳ ರಚನೆ, ಬಣ್ಣಗಳ ಸಂಯೋಜನೆಗೆ ಇದು ಮಾರ್ಗದರ್ಶಿ ಪುಸ್ತಕವಾಗಿದೆ ಎಂದರು.

ಬಸ್ರೂರು ಶ್ರೀ ಶಾರದಾ ಕಾಲೇಜ್ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ, ರಾಷ್ಟ್ರಪ್ರಸಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಲೇಖಕ ಶಂಕರ್ ಕೆಂಚನೂರು, ಹಿರಿಯ ಪತ್ರಕರ್ತ ವಿನಯ ಪಾಯಸ್ ಮಾತನಾಡಿದರು.

ಹೆಮ್ಮಾಡಿ ಸ್ವತಂತ್ರ ಜನತಾ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಪ್ರಿಯಾಂಕಾ ಜೋಸ್ ನಿರೂಪಿಸಿದರು. ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಸ್ವಾಗತಿದರು. ಕಾರ್ಟೂನಿಸ್ಟ್‌ಗಳಾದ ಜೀವನ್ ಶೆಟ್ಟಿ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹೇರ್ಳೆ ಅತಿಥಿಗಳನ್ನು ಗೌರವಿಸಿದರು. ಬಳಿಕ ಕಾಂತರ ಸಿನೆಮಾ ನಿರ್ಮಾಪಕ ಚೇತನ್ ಗೌಡ ಜೊತೆ ಸಂವಾದ ನಡೆಯಿತು.

Exit mobile version