Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಆರಂಭಕ್ಕೆ ಹೋರಾಟ

ಗಂಗೊಳ್ಳಿ: ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಆರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಲು ಸಬ್‌ಸ್ಟೇಶನ್ ವ್ಯಾಪ್ತಿಯ ನಾಗರಿಕರು ನಿರ್ಧರಿಸಿದ್ದಾರೆ.

ಇತ್ತೀಚಿಗೆ ಗುಜ್ಜಾಡಿಯ ಶ್ರೀ ನಾರಾಯಣಗುರು ಕಲ್ಯಾಣ ಮಂದಿರದಲ್ಲಿ ಸಭೆ ಸೇರಿದ ಗಂಗೊಳ್ಳಿ, ಗುಜ್ಜಾಡಿ ಗ್ರಾಮದ ಪ್ರಮುಖರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಉದ್ಯಮಿ ರಾಜೇಂದ್ರ ಸುವರ್ಣ ಅಧ್ಯಕ್ಷತೆಯಲ್ಲಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಉದ್ಯಮಿಗಳಾದ ಎಚ್.ಗಣೇಶ ಕಾಮತ್, ಎಂ.ಎಂ.ಸುವರ್ಣ ಹಾಗೂ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಗೌರವಾಧ್ಯಕ್ಷರಾಗಿ, ರಾಮನಾಥ ಚಿತ್ತಾಲ್ ಗುಜ್ಜಾಡಿ ಮತ್ತು ಬಿ.ಗಣೇಶ ಶೆಣೈ ಕಾರ್ಯದರ್ಶಿಯಾಗಿ, ಮಾಜಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ ಮತ್ತು ರವೀಂದ್ರ ಪಟೇಲ್ ಜೊತೆ ಕಾರ್ಯದರ್ಶಿಯಾಗಿ, ಗಂಗೊಳ್ಳಿ ಸಬ್ ಸ್ಟೇಶನ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರಮುಖ ಕೈಗಾರಿಕೋದ್ಯಮಿಗಳು ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಎಲ್ಲಾ ಗ್ರಾಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ಸಬ್‌ಸ್ಟೇಶನ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಅರಣ್ಯ ಇಲಾಖೆ ಅನಗತ್ಯ ಕ್ಯಾತೆ ತೆಗೆದು ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಅಡ್ಡಿಪಡಿಸುತ್ತಿರುವುದರ ವಿರುದ್ಧ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಆರಂಭದಲ್ಲಿ ಅ.೧೧ರಂದು ಸ್ಥಳೀಯ ಬೈಂದೂರು ಶಾಸಕರನ್ನು ಭೇಟಿ ಮಾಡಿ ಅಹಲವಾಲು ಸಲ್ಲಿಸಲು ಹಾಗೂ ಶಾಸಕರು ಕೈಗೊಳ್ಳುವ ನಿರ್ಧಾರದ ಮೇಲೆ ಪಕ್ಷಾತೀತವಾಗಿ ಹೋರಾಟ ರೂಪಿಸಲು. ಆದಷ್ಟು ಶೀಘ್ರದಲ್ಲಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಜನಪ್ರತಿನಿಧಿಗಳ ಹಾಗೂ ಇಲಾಖಾಧಿಕಾರಿಗಳ ಮೇಲೆ ಒತ್ತಡ ಹೇರಲು ಸಭೆಯಲ್ಲಿ ಸರ್ವಾನುಮತದ ನಿರ್ಣಯಕೈಗೊಳ್ಳಲಾಯಿತು.

ಉದ್ಯಮಿಗಳಾದ ಎಂ.ಎಂ.ಸುವರ್ಣ, ರಾಜೇಂದ್ರ ಸುವರ್ಣ, ದಯಾಕರ ಮೇಸ್ತ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ರಾಮನಾಥ ಚಿತ್ತಾಲ್, ಉಮಾನಾಥ ದೇವಾಡಿಗ, ಬಿ.ಗಣೇಶ ಶೆಣೈ, ರವೀಂದ್ರ ಪಟೇಲ್, ವಿಜೇಶ್ ಪಡಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version