Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕರ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕೋಡಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ 2022-23 ನೇ ಸಾಲಿನ ರಕ್ಷಕ- ಶಿಕ್ಷಕರ ಸಭೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಠಾಣೆ ಪಿಎಸ್ಐ ಸದಾಶಿವ ರಾಮಪ್ಪ ಗವರೋಜಿ ಮಾತನಾಡಿ ವಿದ್ಯಾರ್ಥಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ಮತ್ತು ಸೈಬರ್ ಅಪರಾಧಗಳಲ್ಲಿ ತೊಡಗುವುದರಿಂದ ಮುಂದೆ ಜೀವನದಲ್ಲಿ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಜಾಗ್ರತಿ ಮೂಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಮಟ್ಟದ ತರಬೇತುದಾರರಾದ ಆಝಾದ್ ಮೊಹಮ್ಮದ್ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಪ್ರತಿ ಹಂತದಲ್ಲಾಗುವ ಬದಲಾವಣೆ ಮತ್ತು ಅದರ ಬಗ್ಗೆ ಪೋಷಕರು ವಹಿಸಬೇಕಾದ ಕಾಳಜಿ ಬಗ್ಗೆ ಮತ್ತು ಪೋಷಕರ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಹಾಗೂ ಶಿಕ್ಷಕ ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

2022-24 ನೇ ಸಾಲಿಗೆ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಭೌತಶಾಸ್ತ್ರ ಉಪನ್ಯಾಸಕರಾದ ಸಿದ್ದೀಕ್ ಅಕ್ಬರ್ ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಸರ್ಕಾರಿ ಹಾಗೂ ಖಾಸಗಿ ವಿದ್ಯಾರ್ಥಿವೇತನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಶುಭಹಾರೈಸಿದರು, ವೇದಿಕೆಯಲ್ಲಿ ಸಲಹಾ ಮಂಡಳಿ ಸದಸ್ಯರಾದ ಅಬುಶೇಖ್ ಸಾಹೇಬ್ ಉಪಸ್ಥಿತರಿದ್ದರು. ಉಪನ್ಯಾಸಕಿ ದೀಪ ಸ್ವಾಗತಿಸಿ, ಶ್ವೇತಾ ವಂದಿಸಿದರು ಹಾಗೂ ರಜನಿ ಕಾರ್ಯಕ್ರಮ ನಿರೂಪಿಸಿದರು.

Exit mobile version