ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಊರಿನ ದೇವಾಲಯಗಳು ಅಭಿವೃದ್ಧಿ ಹೊಂದುವುದರಿಂದ ಊರಿಗೆ ಸುಭಿಕ್ಷೆ ಉಂಟಾಗುತ್ತದೆ. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಪ್ರಸಕ್ತ ಆಡಳಿತ ಸಮಿತಿಯವರು ಗ್ರಾಮಸ್ಥರು ಮತ್ತು ಭಕ್ತಾಭಿಮಾನಿಗಳನ್ನು ಸೇರಿಸಿಕೊಂಡು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಭಕ್ತರಿಗೆ ಇನ್ನಷ್ಟು ಅನುಕೂಲತೆಗಳನ್ನು ಕಲ್ಪಿಸುವ ಮತ್ತು ದೇವರ ಸೇವೆಗಾಗಿ ರಜತ ರಥ ನಿರ್ಮಿಸುವ ಅವರ ಯೋಜನೆಗಳು ಶೀಘ್ರ ಕಾರ್ಯಗತಗೊಳ್ಳಲಿ ಎಂದು ಕೋಟ ಶ್ರೀ ಅಮೃತೇಶ್ವರೀ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಹಾರೈಸಿದರು.
ಕೋಟೇಶ್ವರ ಕೊಡಿಹಬ್ಬದ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳಿಗೆ ದೇವಳ ರಂಗಮಂದಿರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕೋಟ ಅಮೃತೇಶ್ವರೀ ದೇವಳದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಭಕ್ತರು ಮತ್ತು ದಾನಿಗಳ ನೆರವನ್ನು ಸ್ಮರಿಸಿಕೊಂಡ ಅವರು, ತಮ್ಮ ಸಮಿತಿ ಅಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿ ಸಾಕಷ್ಟು ಹಣ ಉಳಿಸಿದೆ ಎಂದರು. ಕೋಟೇಶ್ವರ ದೇವಾಲಯದವರ ಬೆಳ್ಳಿ ರಥ ಯೋಜನೆಗೆ ಎರಡು ಕೆ.ಜಿ. ಬೆಳ್ಳಿ ತಾನು ನೀಡುವುದಾಗಿ ಘೋಷಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಡಾ. ವಾದಿರಾಜ ಗೋಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾದ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ವಿ. ಶ್ರೀಧರ ಆಚಾರ್ಯ ಮತ್ತು ಸಮಾಜ ಸೇವಕ ಕೊರ್ಗಿ ವಿಠಲ್ ಶೆಟ್ಟಿ, ಕುಂಭಾಶಿ ಶುಭ ಹಾರೈಸಿದರು. ವಿ. ಶ್ರೀಧರ ಆಚಾರ್ಯ ರಜತ ರಥ ನಿರ್ಮಾಣಕ್ಕೆ ಒಂದು ಕೆ ಜಿ ಬೆಳ್ಳಿ ನೀಡುವುದಾಗಿ ಭರವಸೆ ನೀಡಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಶ್ ಬೆಟ್ಟಿನ್, ಮಂಜುನಾಥ ಆಚಾರ್ಯ, ಶಾರದಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕೋಟಿಲಿಂಗೇಶ್ವರ ಕಲಾಬಳಗದ ಅಧ್ಯಕ್ಷ, ಚಿತ್ರ ನಿರ್ದೇಶಕ ಶ್ರೀಧರ ಉಡುಪ, ಆಸ್ತಿಕ ಸಮಾಜದ ಅಧ್ಯಕ್ಷ ರವೀಂದ್ರ ಐತಾಳ ಮತ್ತು ಕಾರ್ಯದರ್ಶಿ ವಿನೋದ್ ಶೇಟ್ ರನ್ನು ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಸ್ವಾಗತಿಸಿದರು. ಸುನಿಲ್ ಜಿ. ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಭಾರತಿ ವಂದಿಸಿದರು.
ಕೊಡಿಹಬ್ಬದಂಗವಾಗಿ ದೇವರಿಗೆ ಬೆಳಿಗ್ಗೆ ವಿಶೇಷ ಪೂಜಾದಿಗಳು, ಬಿ. ಕೆ. ಸತ್ಯನಾರಾಯಣ ಐತಾಳ, ಬಡಾಮನೆ ಇವರ ಸೇವೆಯಾಗಿ ಶತರುದ್ರಾಭಿಷೇಕ, ರಾತ್ರಿ ದೊಡ್ಡರಂಗಪೂಜೆ ನಡೆಯಿತು. ರಾತ್ರಿ ದೇವರ ವೃಷಭ ವಾಹನೋತ್ಸವ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಿತಿ ಸದಸ್ಯ, ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಮತ್ತು ಸಹ ಪ್ರಾಯೋಜಿತ, ಶ್ರೀ ಕೋಟಿಲಿಂಗೇಶ್ವರ ಕಲಾಬಳಗದವರ ಪ್ರಸ್ತುತಿಯಲ್ಲಿ ‘ವಾಜಿ ಗ್ರಹಣ’ ಯಕ್ಷಗಾನ ನಡೆಯಿತು.