Kundapra.com ಕುಂದಾಪ್ರ ಡಾಟ್ ಕಾಂ

ಬೇಕರಿಯ ಹುಡುಗರಿಗೆ ಹಲ್ಲೆ ಮಾಡಿ ಹಣ ಎಗರಿಸಿದ್ದ ರೌಡಿಗಳ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೆಂಗಳೂರು ಎಚ್.ಎ.ಎಲ್ ಸಮೀಪ ಕುಂದನಹಳ್ಳಿ ಗೇಟ್ ಬಳಿ ಬ್ರಹ್ಮಲಿಂಗೇಶ್ವರ ಬೇಕರಿ ನಡೆಸುತ್ತಿರುವ ಬೈಂದೂರು ಮದ್ದೋಡಿಯ ಯುವಕರಿಗೆ ಹಲ್ಲೆ ನಡೆಸಿ ಹಣ ಎಗರಿಸಿದ್ದ ಮೂವರು ಆರೋಪಿಗಳನ್ನು ಹೆಚ್.ಎ.ಎಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿರುವ ಕಾರ್ತಿಕ್ (20), ಅಲ್ಯೂಮಿನಿಯಂ ಕೆಲಸಗಾರ ಸಲ್ಮಾನ್ (20), ಖಾಸಗಿ ಹೋಟೆಲ್ ಮ್ಯಾನೇಜರ್ ಕಾರ್ತಿಕ್ (23) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಅವರು ಘಟನೆಯ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಬೇಕರಿಯಲ್ಲಿ ವ್ಯವಹಾರ ನಡೆಸಿ ಹಣ ಕೇಳಿದಾಗ ಖ್ಯಾತೆ ತೆಗೆದ ರೌಡಿಗಳು ಅಂಗಡಿಯೊಳ್ಳಕ್ಕೆ ನುಗ್ಗಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ನಾಲ್ಕೈದು ಮಂದಿ ಅಂಗಡಿಯೊಳ್ಳಕ್ಕೆ ನುಗ್ಗಿ ಹಲ್ಲೆ ಇಬ್ಬರಿಗೂ ಹಲ್ಲೆ ನಡೆಸಿದ್ದು, ಪ್ರಶ್ನಿಸಲು ಬಂದವರಿಗೂ ಹಲ್ಲೆ ನಡೆಸಲಾಗಿದೆ. ಈ ದೃಶ್ಯ ಅಂಗಡಿಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಕರಾವಳಿಯ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್.ಎ.ಎಲ್ ಪೊಲೀಸ್ ಠಾಣೆಗೆ ಕರಾವಳಿಯ ವಿವಿಧ ಸಂಘಟನೆಗಳು ಹಾಗೂ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ:
► ಬೆಂಗಳೂರು: ಪುಡಿರೌಡಿಗಳಿಂದ ಬೇಕರಿಯಲ್ಲಿ ದಾಂದಲೆ, ಬೈಂದೂರು ಮೂಲದ ಯುವಕರಿಗೆ ಗಾಯ – https://kundapraa.com/?p=63559 .

Exit mobile version