Kundapra.com ಕುಂದಾಪ್ರ ಡಾಟ್ ಕಾಂ

ನಮ್ಮಲ್ಲಿರುವ ತೊಡಕುಗಳನ್ನು ಪರಿಹರಿಸಬಲ್ಲ ಏಕೈಕ ಸಾಧನ, ಸಂಗೀತ – ಅಪ್ಪಣ್ಣ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಲಾಕ್ಷೇತ್ರ – ಕುಂದಾಪುರ ಟ್ರಸ್ಟ್ ಆಗಿ ಉನ್ನತೀಕರಣಗೊಂಡಿದ್ದು, ಕಲಾಕ್ಷೇತ್ರದ ನವೀಕೃತ ಕಛೇರಿಯಲ್ಲಿ ಟ್ರಸ್ಟ್ನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿಗಳು ಉಳಿಯಬೇಕಾದರೆ ಕಲೆ ಉಳಿಯಬೇಕು, ಅಂತಹ ಕೆಲಸವನ್ನು ಹಲವು ವರ್ಷಗಳಿಂದ ಕಲಾಕ್ಷೇತ್ರ ಮಾಡುತ್ತಾ ಬಂದಿದೆ. ಸಂಗೀತದ ಆಕರ್ಷಣೆ ಯಾರನ್ನೂ ಖಿನ್ನತೆಗೆ ಒಳಗಾಗಲು ಬಿಡುವುದಿಲ್ಲ, ಆಕಸ್ಮಾತ್ ಖಿನ್ನತೆಗೆ ಒಳಗಾದವ ಸಂಗೀತ ಕೇಳುವ ಹವ್ಯಾಸವನ್ನು ಬೆಳೆಸಿಕೊಂಡರೆ ಅದರಿಂದ ಹೊರಬರಲು ಸಾಧ್ಯವಿದೆ ಹಾಗಾಗಿ ನಮ್ಮ ತೊಡಕುಗಳನ್ನು ಪರಿಹರಿಸಬಲ್ಲ ಏಕೈಕ ಸಾಧನವೆಂದರೆ ಅದು ಸಂಗೀತ ಎಂದರು.

ಹಿರಿಯ ಚೇತನ ಪ್ರಕಾಶ್ ಯಡಿಯಾಳ್ ನೆನಪಿನಲ್ಲಿ ನಿರ್ಮಿಸಿದ ಪ್ರತಿಧ್ವನಿರಹಿತ ಹವಾನಿಯಂತ್ರಿತ ಕಿರುಸಭಾಂಗಣವಾದ ’ಪ್ರಕಾಶಾಂಗಣ’ ಮತ್ತು ಸಿತಾರ್ ಕಲಾವಿದ ವಿದ್ವಾನ್ ಅವಿನಾಶ ಹೆಬ್ಬಾರರ ನೆನಪಿನಲ್ಲಿ ನಿರ್ಮಿಸಿದ ’ಅವಿನಾಶೀ ರಂಗ’ ಎಂಬ ವೇದಿಕೆಯನ್ನು ಕ್ರಮವಾಗಿ ಜ್ಯೋತಿ ಪ್ರಕಾಶ್ ಯಡಿಯಾಳ್ ಮತ್ತು ಶಾರದಾಂಬಾ ಅವಿನಾಶ್ ಹೆಬ್ಬಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎ.ಎಸ್.ಎನ್. ಹೆಬ್ಬಾರ್ ಮಿತ್ರತ್ವದ ಮಹತ್ವ ಮತ್ತು ಮೌಲ್ಯ ಏನು ಎಷ್ಟು ಎಂಬುವುದು ಅಗಲಿದ ಗೆಳೆಯರ ಹೆಸರಿನಲ್ಲಿ ನಿರ್ಮಿಸಿದ ಪ್ರಕಾಶಾಂಗಣ ಮತ್ತು ಅವಿನಾಶೀ ರಂಗ ಸಾಕ್ಷಿಯಾಗಿದೆ ಎಂದರು.

ಶುಭಾಶಂಸನೆ ಗೈದ ಮೂಡುಬಿದರೆಯ ಕೆ.ವಿ. ರಮಣ್ ಮಾತನಾಡುತ್ತ ಆಯಾಯ ಕಾಲಕ್ಕೆ ಯಾವುದು ಸಲ್ಲಬೇಕೋ ಅದು ಅಲ್ಲಲೇ ಬೇಕು ಅದು ಕಾಲದ ನಿಯಮ, ಪ್ರಕೃತಿಯ ನಿಯಮ ಆದರೆ ಸಂದ ಬಳಿಕವೂ ಉಳಿಯುವುದಿದೆಯಲ್ಲ ಅದು ಸ್ನೇಹ ಮತ್ತು ಗೆಳತನಕ್ಕೆ ಸಲ್ಲಿಸುವ ಗೌರವ. ಕಲಾಕ್ಷೇತ್ರ ಸಾಂಸ್ಕೃತಿಕ ವಲಯದಲ್ಲಷ್ಟೇ ಕೆಲಸ ಮಾಡುತ್ತದೆ ಅಂದುಕೊಂಡಿದ್ದೆ ಆದರೆ ಮಿತೃತ್ವಕ್ಕೆ ಸ್ನೇಹಾಚಾರಕ್ಕೆ ಇಷ್ಟೊಂದು ಬೆಲೆ ನೀಡುತ್ತದೆ ಅಂದುಕೊಂಡಿರಲಿಲ್ಲ. ಇದು ಸಮಾಜಕ್ಕೆ ಆದರ್ಶವಾಗಬೇಕಾದ ವಿಷಯ. ಎಲ್ಲಿ ಪ್ರಾಮಾಣಿಕವಾದ ಶ್ರದ್ಧೆ, ಪರಿಶ್ರಮವಿರುತ್ತದೆಯೊ ಅದಕ್ಕೆ ಬೆಲೆ ಬಂದೇ ಬರುತ್ತದೆ ಎನ್ನುವುದು ಸ್ಪಷ್ಟ. ಕಲಾಕ್ಷೇತ್ರ-ಕುಂದಾಪುರವು ಕುಂದಾಪುರಕ್ಕೆ ಆಸ್ತಿಯಾಗಲಿ ಎಂದರು.

ಡಾ. ರಾಜಾರಾಮ್ ಶೆಟ್ಟಿ ಮಾತನಾಡುತ್ತಾ ಹಾಡುಗಾರಿಕೆಯ ಅರಿವೆ ಇಲ್ಲದ ನನಗೆ ಸಭೆ ಸಮಾರಂಭಗಳಲ್ಲಿ ಹಾಡುವಷ್ಟರ ಮಟ್ಟಿಗೆ ಕಲಾಕ್ಷೇತ್ರ ನನ್ನನ್ನು ಬೆಳೆಸಿದೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಪಡುತ್ತೇನೆ ಎಂದರು.

ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗಣೇಶ್ ಕಿಣಿ ಬೆಳ್ವೆ ಮತ್ತು ಉದ್ಯಮಿ ಕೆ.ಆರ್ ನಾಯ್ಕ್ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಅಧ್ಯಕ್ಷ ಕಿಶೋರ್ ಕುಮಾರ್, ಧನ್ಯವಾದವನ್ನು ಶ್ರೀಧರ ಸುವರ್ಣ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ರಾಜೇಶ್ ಕಾವೇರಿ ಮಾಡಿದರು.

Exit mobile version