ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಭಾರತ್ ಸ್ಕೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಜಾಂಬೂರಿಯ ತಯಾರಿ ಕೊನೆಯ ಹಂತದಲ್ಲಿದ್ದು, ದೇಶದ ವಿವಿಧ ಭಾಗಗಳ ಸೌಟ್ಸ್. ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಪ್ರತಿನಿಧಿಗಳ ತಂಡ ಮೂಡುಬಿದಿರೆಯನ್ನು ತಲುಪಿವೆ. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಬೃಹತ್ ನೋಂದಾವಣೆಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ಕಿಟ್
ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ೭ ದಿನಗಳಿಗೆ ಅಗತ್ಯವಿರುವ ಅಗತ್ಯ ಕಿಟ್ನ್ನು ಒದಗಿಸಲಾಗುವುದು. ಈ ಕಿಟ್ ಬ್ಯಾಗ್, ನೀರಿನ ಬಾಟಲಿ, ಬರೆಯುವ ಪುಸ್ತಕ, ಪೆನ್ ಸೇರಿದಂತೆ ೧೫ ಸಾಮಾಗ್ರಿಗಳನ್ನು ಒಳಗೊಂಡಿದೆ.
ಹಬ್ಬದಡುಗೆಯ ಘಮ..!
ಹಸಿದ ಹೊಟ್ಟೆಯನ್ನು ತಣಿಸಲು ಮೊದಲ ದಿನದಿಂದಲೇ ಮುಂಜಾನೆ ೪ ಗಂಟೆಗೆ ರುಚಿಯಾದ ಉಪಹಾರ ಹಾಗೂ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ನುರಿತ ಬಾಣಸಿಗರ ತಂಡ ಸಮಯಕ್ಕೆ ಸರಿಯಾಗಿ ಊಟೋಪಚಾರದ ನಿರ್ವಹಣೆ ಮಾಡಲಿದ್ದಾರೆ. ಆಯಾಯ ವಸತಿ ನಿಲಯಗಳಲ್ಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಪಾಕಶಾಲೆಯಲ್ಲಿ ಸುಮಾರು 3000 ಜನರಿಗೆ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಜಿಎಸ್ಬಿ, ಜೈನ್ ಹಾಗೂ ಬ್ರಾಹ್ಮಣ ಶೈಲಿಯ ಕರಾವಳಿ ರುಚಿಯ ಖಾದ್ಯಗಳು ಇರಲಿವೆ
ಕಾರ್ಯಕ್ರಮದ ನೇರಪ್ರಸಾರ ನಿಮ್ಮ ಮೊಬೈಲ್ನಲ್ಲಿಯೇ..
ಜಾಂಬೂರಿಗೆ ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸೇರಿದಂತೆ ಸಾರ್ವಜನಿಕರೂ ಆಗಮಿಸಲಿದ್ದು, ಇವರೆಲ್ಲರ ಅನುಕೂಲಕ್ಕಾಗಿ ೫ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೇರಪ್ರಸಾರದ ಮೂಲಕ ‘ಆಳ್ವಾಸ್ ಎಜುಕೇಶನ್ ಫೌಂಡೇಶನ್’ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್ನ್ನು ಕ್ಯಾಂಪಸ್ನ ವಿವಿಧೆಡೆ ಬಿತ್ತರಿಸಲಾಗಿದೆ. ಮೊಬೈಲ್ ಇರುವವರು ಈ ಲಿಂಕ್ ಮೂಲಕ ನೇರಪ್ರಸಾರವನ್ನು ವೀಕ್ಷಿಸಬಹುದು.